ಶನಿವಾರ, ಡಿಸೆಂಬರ್ 6, 2008

ಮರೆತೇನೆಂದರೆ ಮರೆಯಲಿ ಹ್ಯಾಂಗ!



ಕಲಿತದ್ದನ್ನು ಮಿದುಳು ಎಂದಿಗೂ ಮರೆಯದು...

ಎಷ್ಟೋ ವರ್ಷಗಳ ಹಿಂದೆ ನೀವೊಂದು ಸ್ಥಳಕ್ಕೆ ಭೇಟಿ ನೀಡಿರುತ್ತೀರಿ. ಅಲ್ಲಿ ನಿಮಗೆ ಒಬ್ಬ ವ್ಯಕ್ತಿ ಪರಿಚಯವಾಗಿರುತ್ತಾರೆ. ನಂತರ ಕೆಲಸ ಮುಗಿದ ಮೇಲೆ ಮರಳಿ ಬಂದು ನಿಮ್ಮ ಜೀವನ ನೀವು ನೋಡಿಕೊಂಡಿರುತ್ತೀರಿ. ಅಲ್ಲಿಗದು ಮುಗಿದ ವಿಚಾರ. ೧೦ ವರ್ಷ ಕಳೆಯುತ್ತದೆ. ಆ ವ್ಯಕ್ತಿ ಏಕೋ ನೆನಪಿಗೆ ಬರುತ್ತಾರೆ. ಆದರೆ ಹೆಸರೇ ನೆನಪಿಗೆ ಬರದು! ಏನೋ ಮಾಡುತ್ತಾ ಕುಳಿತಿದ್ದಾಗ ಹೆಸರು ಪಕ್ಕನೆ ನೆನಪಾಗುತ್ತದೆ. ಅರೆರೆ! ಇದು ಹೇಗೆ ಸಾಧ್ಯ? ಎಲ್ಲಿಂದ ಬಂತು ಈ ಹೆಸರು. ನಿಮಗೇ ಆಶ್ಚರ್ಯವಾಗುತ್ತದೆ!

ಈ ಅನುಭವ ಒಂದಲ್ಲಾ ಒಂದು ಸಂದರ್ಭದಲ್ಲಿ ಎಲ್ಲರಿಗೂ ಆಗೇ ಆಗಿರುತ್ತದೆ. ಮರೆತೇ ಹೋದೆವು ಎಂದು ನಾವಂದು ಅಂದುಕೊಂಡಿದ್ದ ಸಂಗತಿ ನಿಜಕ್ಕೂ ಮರೆತು ಹೋಗಿರುವುದಿಲ್ಲ. ನೆನಪಿನ ಯಾವುದೋ ಒಂದು ಪದರದಲ್ಲಿ ಹಾಗೇ ಉಳಿದಿರುತ್ತದೆ. ಹೌದು. ಮಿದುಳು ಒಮ್ಮೆ ಕಲಿತದ್ದನ್ನು, ನೋಡಿದ್ದನ್ನು, ಕೇಳಿದ್ದನ್ನು, ಓದಿದ್ದನ್ನು ಎಷ್ಟೇ ವರ್ಷವಾಗಲಿ, ಆ ವಿಷಯ ಎಷ್ಟೆ ಅಮುಖ್ಯವಾಗಲಿ, ಅದನ್ನು ಮರೆಯುವುದೇ ಇಲ್ಲ. ತನ್ನ ಸಾಗರದಾಳದ ನೆನಪಿನಿಂದ ಆಚೆ ತಂದೇ ತರುತ್ತದೆ. ಮಿದುಳಿನ ಹಾರ್ಡ್ ಡಿಸ್ಕ್‌ನಲ್ಲಿ ಎಲ್ಲವೂ ಶೇಖರವಾಗಿರುತ್ತದೆ!

ಮನುಷ್ಯನಿಗೊಬ್ಬನಿಗೇ ಈ ಅದ್ಭುತ ಶಕ್ತಿ ಇರುವುದು. ಕಲಿಯುವ, ನೆನಪಲ್ಲಿ ಇಟ್ಟುಕೊಳ್ಳುವ ಮಹತ್ ಶಕ್ತಿ ನಮಗೆ ಮಾತ್ರ ಇರುವುದು. ಈ ವಿಚಾರವನ್ನು ಪ್ರಾಣಿಗಳು ಮಾಡುವುದಿರಲಿ. ಕನಸಲ್ಲೂ ಕಲ್ಪಿಸಿಕಳ್ಳಲು ಸಾಧ್ಯವಿಲ್ಲ. ಆದರೆ ಆಶ್ಚರ್ಯಕರ ಸಂಗತಿ ಇದಲ್ಲ. ನೆನಪಿನ ಕ್ಷೇತ್ರದಲ್ಲಿ ನಾವೀಗ ಕೇವಲ ಮೊದಲ ಮೆಟ್ಟಿಲನ್ನು ಮಾತ್ರ ಏರಿದ್ದೇವೆ. ಹತ್ತಬೇಕಿರುವುದು ಇನ್ನು ಕೋಟಿ ಮೆಟ್ಟಿಲಿದೆ. ಅಂದರೆ ನಾವು ಮಿದುಳಿನ ಈ ಒಂದು ಮೆಟ್ಟಿಲು ಶಕ್ತಿಯನ್ನು ಮಾತ್ರ ಬಳಸಿಕೊಂಡಿದ್ದೇವೆ.

ಮರೆವು ಎನ್ನುವುದು ಸುಳ್ಳು!: ನರಶಾಸ್ತ್ರ ತಜ್ಞರು ಹೊಸ ಸಂಶೋಧನೆಯನ್ನು ಈಗ ತಾನೆ ಮಾಡಿದ್ದಾರೆ. ಅವರ ಪ್ರಕಾರ ಮರೆವು ಎನ್ನುವುದು ಸುಳ್ಳು. ಮರೆವು ಕೇವಲ ತಾತ್ಕಾಲಿಕ. ನಮಗೆ ಬೇಕಾದ ನೆನಪನ್ನು ನಾವು ಬೇಕಾದಾಗ ಹೊರ ತೆಗೆಯಬಹುದು. ತಜ್ಞರು ನೆನಪಿಗೆ ಹೊಸ ವೈಜ್ಞಾನಿಕ ವ್ಯಾಖ್ಯಾನ ನೀಡಿದ್ದಾರೆ. ಮಿದುಳು ಯಾವುದೇ ಹೊಸ ಸಂಗತಿಯನ್ನು ಗ್ರಹಿಸಿದಾಗ ಮಿದುಳಲ್ಲಿನ ಒಂದು ಜೀವಕೋಶದಲ್ಲಿ ಘರ್ಷಣೆ ಉಂಟಾಗಿ, ಅದರಲ್ಲಿ ನೆನಪಿನ ಹೊಸ ಹೆಜ್ಜೆ ಮೂಡುತ್ತದೆ. ಅದರ ಅಗತ್ಯ ಇರುವವರೆಗೂ ಅದು ಚಾಲ್ತಿಯಲ್ಲಿದ್ದು, ನಂತರ ಆ ಜೀವಕೋಶ ನಿದ್ರೆಗೆ ಹೋಗುತ್ತದೆ. ಆ ನಿದ್ರೆಗೆ ಹೋಗುವ ಪ್ರಕ್ರಿಯೆಯೇ ಮರೆವು. ಆ ಜೀವಕೋಶವನ್ನು ಬಡಿದೆಬ್ಬಿಸುವುದೇ ನೆನಪು!

ಪ್ರಸಂಗ ೧: ಕಿಟಕಿಯೊಳಗೆ ನೊಣವೊಂದು ಸೇರಿಕೊಂಡಿರುತ್ತದೆ. ಅದು ಆಚೆ ಹೋಗಲು ಕಷ್ಟ ಪಡುತ್ತಿರುತ್ತದ. ಆದರೆ ಮಧ್ಯೆ ಇರುವ ಗಾಜಿನ ತಡೆ ಅದಕ್ಕೆ ಕಾಣುತ್ತಿರುವುದಿಲ್ಲ. ಸತತ ಪ್ರಯತ್ನ ಮಾಡಿದ ಅದಕ್ಕೆ, ತಪ್ಪಿನ ಅರಿವಾಗಿ ಬೇರೆ ದಾರಿ ಹುಡುಕುತ್ತದೆ. ಕಿಂಡಿಯ ಮೂಲಕ ಆಚೆ ಹೋಗುತ್ತದೆ. ಮನುಷ್ಯನೂ ಹೀಗೇ ಮಾಡುತ್ತಾನೆ. ಅವನಿಗೆ ದೊಡ್ಡ ಗಾಜಿನ ಬಾಗಿಲಲ್ಲಿ ಗಾಜಿರುವುದು ಕಾಣದೆ ಹಣ ಒಡೆದುಕೊಂಡಾಗ ತಪ್ಪಿನ ಅರಿವಾಗಿ ಎಚ್ಚರಿಕೆಯಿಂದ ಹೋಗುತ್ತಾನೆ. ಇದು ಇಷ್ಟಕ್ಕೆ ಸೀಮಿತವಾಗದೆ, ಮುಂದೆ ಬೈಕ್‌ನಲ್ಲಿ ಹೋಗುವಾಗ, ಸ್ಕೈ ಮಾಡುವಾಗ, ಮೆಟ್ಟಿಲು ಇಳಿಯುವಾಗ ಸಹಾಯಕ್ಕೆ ಬಂದು ತಪ್ಪುಗಳಾಗದಂತೆ ಎಚ್ಚರಿಕ ವಹಿಸುತ್ತಾನೆ. ಅಂದರೆ ಮನುಷ್ಯನಿಗೆ ಎಲ್ಲ ಕ್ಷೇತ್ರಗಳಲ್ಲೂ ಅನುಭವ ಬೇಕಿಲ್ಲ. ಒಂದರ ಅನುಭವವೇ ಮತ್ತೊಂದಕ್ಕೆ ಸಹಾಯ ಮಾಡುತ್ತದೆ. ಹಾಗಾಗಿ ನೆನಪು ಬಹಳಷ್ಟು ಸಂದರ್ಭಗಳಲ್ಲಿ ಕೇವಲ ಹೋಲಿಕೆಯಾಗಿ ಮಾತ್ರ ಸಹಾಯ ಮಾಡುತ್ತದೆ ಎನ್ನುವುದು ವಿಜ್ಞಾನಿಗಳ ವಾದ.

ಪ್ರತಿಯೊಂದು ಹೊಸ ವಿಚಾರವನ್ನು ಮಿದುಳು ಕಲಿತುಕೊಂಡಾಗ ಮಿದುಳಿನಲ್ಲಿ ಹೊಸ ಪದರವೊಂದು ಸೃಷ್ಟಿಯಾಗುತ್ತದೆ. ನೆನಪುಗಳು ಸೇರುತ್ತಾ ಹೋದಂತೆ ಈ ಪದರಗಳು ಹೆಚ್ಚಾಗಿ, ಒಂದಕ್ಕೊಂದು ನೇಯ್ದುಕೊಳ್ಳುತ್ತಾ, ನೆನಪಿನ ಸಂಕೀರ್ಣವೇ ಸೃಷ್ಟಿಯಾಗುತ್ತದಂತೆ. ಹಾಗಾಗಿ ಒಂದು ಮಗುವಿನ ಮಿದುಳನ್ನು ನೋಡಿದಾಗ ಕಡಮೆ ನೆರಿಗೆಗಳೂ, ವಯಸ್ಕರ ಮಿದುಳನ್ನು ನೋಡಿದಾಗ ಹೆಚ್ಚು ನೆರಿಗೆಗಳು ಗೋಚರಿಸುತ್ತವೆ.

ವಿಜ್ಞಾನಿಗಳ ಪ್ರಕಾರ ಈ ಪರದೆಗಳ ಮಧ್ಯೆ ಸಂಪರ್ಕ ಇರುತ್ತದೆ. ಈ ಸಂಪರ್ಕ ಹೆಚ್ಚುತ್ತಾ ಹೋಗಿ, ನೆನಪಿನ ಜೀವಕೋಶಗಳು ಪರದೆಯನ್ನು ಬಿಟ್ಟು ಆಚೆ ಬರುತ್ತವೆ. ಆಗ ನಮಗೆ ಮರೆವಿನ ಸಮಸ್ಯೆ ಎದುರಾಗುತ್ತದೆ. ಆದರೆ ಮಿದುಳಿಗೆ ಆ ನೆನಪು ಬೇಕಾದಾಗ ಮತ್ತೆ ಆ ನೆನಪಿನ ಜೀವಕೋಶವನ್ನು ಪರದೆಯ ಒಳಗೆ ಸೇರಿಸಿಕೊಂಡು ನೆನಪನ್ನು ಎಚ್ಚರಿಸುತ್ತದೆ.

ಪ್ರಸಂಗ ೨: ಚಿಕ್ಕ ಮಗುವಾಗಿದ್ದಾಗ ನೀವು ಸೈಕಲ್ ತುಳಿಯುವುದನ್ನು ಕಲಿತಿರುತ್ತೀರಿ. ನಂತರ ೧೦ ವರ್ಷಗಳ ಕಾಲ ಸೈಕಲ್ ತುಳಿದಿರುವುದಿಲ್ಲ. ತಕ್ಷಣ ನಿಮಗೆ ಸೈಕಲ್ ಕೊಟ್ಟಾಗ ಬಹಳ ಪರಿಣಿತರಂತೆ ಸೈಕಲ್ ತುಳಿಯುತ್ತೀರಿ. ಹೇಗಿದು ಸಾಧ್ಯ. ಇದೇ ನೀವು ಮೇಲೆ ನೋಡಿದ ವಿವರಣೆಯಲ್ಲಿ ತಿಳಿಯುವುದು. ಸೈಕಲ್ ತುಳಿಯುವ ಉಪಯುಕ್ತ ನೆನಪನ್ನು ಮಿದುಳು ಪುನರೆಚ್ಚರಿಸಿ ಕೆಲಸಕ್ಕೆ ಬಳಸಿಕೊಳ್ಳುತ್ತದೆ. ಇದೇ ಮಿದುಳಿನ ಅದ್ಭುತ ಶಕ್ತಿ.

ವಿಜ್ಞಾನಿಗಳು ಮಿದುಳಲ್ಲಿ ಮಾಹಿತಿ ಶೇಖರಣಾ ಕೋಶಗಳನ್ನು ಪತ್ತೆ ಹಚ್ಚಿದ್ದಾರೆ. ಇದು ನಾವು ನೀವೆಲ್ಲಾ ತಿಳಿದಿರುವ ಕಂಪ್ಯೂಟರ್‌ಗಳ ಸಿಡಿ, ಡಿವಿಡಿ, ಹಾರ್ಡ್ ಡಿಸ್ಕ್‌ನಂತೆ! ಒಮ್ಮೆ ಒಂದು ಪ್ರಸಂಗ ಮಿದುಳಲ್ಲಿ ಉಳಿದುಕೊಂಡಾಗ ಮಾಹಿತಿ ಸಂಗ್ರಹಣಾ ಜೀವಕೋಶಗಳು ಮಿದುಳಿನ ಪರದೆಗಳಲ್ಲಿ ಶೇಖರವಾಗುತ್ತಾ ಹೋಗುತ್ತದೆ. ಅದನ್ನು ಏಷ್ಟೇ ವರ್ಷಗಳಾಗಲಿ, ಮಿದಳು ಅದನ್ನು ಬಳಸಿಕೊಂಡು ನೆನಪನ್ನು ಮೂಡಿಸುತ್ತದೆ. ಹಾಗಾಗಿ ನಾವು ಮರೆತೇ ಹೋಗಿದ್ದೇವೆ ಎಂದು ಅಂದುಕೊಳ್ಳುವುದು ಕೇವಲ ಅರ್ಧ ಸತ್ಯ. ನೆನಪು ಮಿದುಳಲ್ಲಿ ಎಂದೂ ಶಾಶ್ವತ ಹಾಗೂ ನಾಶವಾಗುವ ಪ್ರಶ್ನೆಯೇ ಇಲ್ಲದ್ದು.

ಬಳಕೆಯಾಗಿರುವುದು ಶೇ. ೧೦ ಅಷ್ಟೇ: ನೀವು ಒಂದು ವಿಷಯ ಕೇಳಿರಬಹುದು. ಭೌತ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್ ಅವರ ಮಿದುಳನ್ನು ಇನ್ನೂ ಸಂರಕ್ಷಿಸಿ ಎಲ್ಲೋ ಇಟ್ಟಿದ್ದಾರೆ ಎಂದು. ಅವರ ಮಿದುಳು ಬೇರೆಯವರ ಮಿದುಳಿಗಿಂತಾ ವಿಭಿನ್ನವಾಗಿತ್ತೆಂದೂ, ದೊಡ್ಡದಾಗಿತ್ತೆಂದು. ಇವೆಲ್ಲವೂ ಸತ್ಯ. ಮಿದುಳನ್ನು ಇನ್ನೂ ಸಂರಕ್ಷಿಸಲಾಗಿದೆ. ಆದರೆ ಆಲ್ಬರ್ಟ್ ಐನ್‌ಸ್ಟೀನ್ ಬುದ್ಧಿವಂತರಾಗಲು ದೊಡ್ಡ ಮಿದುಳ ಕಾರಣವಲ್ಲ. ಅವರು ಮಿದುಳಿನ ಹೆಚ್ಚು ಭಾಗವನ್ನು, ಜೀವಕೋಶಗಳನ್ನು ಬಳಸಿಕೊಂಡಿದ್ದರು. ವಿಜ್ಞಾನಿಗಳ ಪ್ರಕಾರ ಒಬ್ಬ ಸಾಮಾನ್ಯ ಮನುಷ್ಯ ಮಿದುಳಿನ ಕೇವಲ ಶೇ. ೫ ರಿಂದ ೮ ರಷ್ಟು ಭಾಗವನ್ನು ಮಾತ್ರ ಬಳಸಿಕೊಂಡಿರುತ್ತಾನೆ. ಅಂದರೆ ಮಿಕ್ಕ ಭಾಗ ಸಂಪೂರ್ಣ ಖಾಲಿ. ಬುದ್ಧಿವಂತರು ಶೇ. ೧೦ ಭಾಗ ಬಳಸಿಕೊಳ್ಳುತ್ತಾರೆ. ಇಷ್ಟು ಕಡಮೆ ಬಳಕೆಯಲ್ಲೇ ಮನುಷ್ಯ ಈಗಿನ ಎಲ್ಲ ಸಾಧನೆ ಮಾಡಿದ್ದಾನೆ. ಇನ್ನು ಪೂರ್ಣ ಬಳಕೆಯಾದರೆ? ವಿಸ್ಮಯವೇ ಆಗಬಹುದು. ವಿನಾಶವೂ ಆಗಬಹುದು. ಕೇಳಿದ್ದೀರಲ್ಲ, ವಿನಾಶ ಕಾಲೇ ವಿಪರೀತ ಬುದ್ಧಿ ಎಂದು. ಅಂದ ಹಾಗೆ ಐನ್‌ಸ್ಟೀನ್ ಮಿದುಳಿನ ಎಷ್ಟು ಭಾಗ ಬಳಸಿಕೊಂಡಿದ್ದರು ಗೊತ್ತೆ, ಬರೋಬ್ಬರಿ ಶೇ. ೩೦!

4 ಕಾಮೆಂಟ್‌ಗಳು:

ಮಂಜುನಾಥ ಗೌಡ ಹೇಳಿದರು...

ನಿಮ್ಮ ಬ್ಲಾಗ್ ನಲ್ಲಿ ಮೂಡಿ ಬರುತ್ತಿರುವ ಲೇಖನಗಳು ಅದ್ಭುತ ಮತ್ತು ನಂಬಲಾಸಾದ್ಯ ಆದರು ನಂಬಬೇಕು..... ಏಕೆಂದರೆ ಇದು ವಿಜ್ಞಾನಕ್ಕೆ ಸಂಬಂದಿಸಿದ್ದು..... ಖಗೋಳಕ್ಕೆ ಸಂಬಸಿದ, ರಸಾಯನಿಕ ವಿಷಯಗಳು, ಭೌತಿಕವಾಗಿ ನಡೆಸುವ ಪ್ರಯೋಗಗಳು ಮತ್ತು ಪ್ರಾಣಿ ಪ್ರಪಂಚಕ್ಕೆ ಸೇರಿದ ಅಪರೂಪದ ಪ್ರಭೇದಗಳು ಹಾಗು ಪ್ರಾಚೀನ ಪಳಯುಳಿಕೆಗಳ ಬಗ್ಗೆ ಲೇಖನಗಳು ಮೂಡಿಬಂದರೆ ವಿಧ್ಯಾರ್ಥಿಗಳಿಗೆ ತುಂಬಾ ಉಪಯುಕ್ತ.

- ಮಂಜುನಾಥ, ಬೆಂಗಳೂರು
ಮಿಂಚುಣಿಯ ವಿಳಾಸ: manjuabhi@live.com

ನೇಸರ ಕಾಡನಕುಪ್ಪೆ ಹೇಳಿದರು...

Thank You Manju.

ಗೋವಿಂದ್ರಾಜ್ ಹೇಳಿದರು...

you are foing interesting stories every other week..

ನೇಸರ ಕಾಡನಕುಪ್ಪೆ ಹೇಳಿದರು...

Thank You Govind