ಮಂಗಳವಾರ, ಫೆಬ್ರವರಿ 3, 2009

ಚಂದ್ರನ ಮೇಲೆ ಮನೆ ಕಟ್ಟಿ!
ಚಂದ್ರನಿಗಾಗಿ ಸಿದ್ಧವಾಗಿವೆ ಹೊಸ 'ಚಂದ್ರ ಕಟ್ಟಡ' ಸಾಮಗ್ರಿ


ಭೂಮಿಯಾಚಗಿನ ವಿಶ್ವದ ಶೋಧಕ್ಕಾಗಿ ನಾವು ಹುಡುಕಾಡಿರುವ ಶ್ರಮ ಎಷ್ಟು ದೊಡ್ಡದು ಅಲ್ಲವೆ? ೧೯೬೨ ರಲ್ಲಿ ಅಮೆರಿಕಾದ ನಾಸಾದ ಅಂತರಿಕ್ಷಯಾನಿ ನೀಲ್ ಆರ್ಮ್‌ಸ್ಟ್ರಾಂಗ್ ಚಂದ್ರನ ಮೇಲೆ ಕಾಲಿಟ್ಟಾಗ ಅವನಿಗೆ ಇಷ್ಟು ಜಾಗ ಇಲ್ಲಿ ಹೀಗೆ ಖಾಲಿ ಬಿದ್ದೆದೆಯಲ್ಲ ಎಂದು ಅನ್ನಿಸಿರಬೇಕಲ್ಲವೆ? ಅವನನ್ನೇ ಕಾತರರಾಗಿ ನೋಡುತ್ತಿದ್ದ ಕೋಟ್ಯಾಂತರ ಮಂದಿ, ಚಂದ್ರನ ನೆಲವನ್ನು ನೋಡಿ ನಾವು ಅಲ್ಲಿ ಜಾಗ ಹೊಂದಬೇಕು ಎಂದು ಅನ್ನಿಸಿರಬೇಕಲ್ಲವೆ? ಭೂಮಿಯಲ್ಲಿ ಜಾಗ ಸಿಗದಂತಾಗಿ ಹೊರ ಗ್ರಹಗಳಲ್ಲಿ ಜಾಗ ಕೊಳ್ಳುವ ಮಟ್ಟಕ್ಕೆ ಮನುಷ್ಯನ ಆಲೋಚನೆ ಬೆಳೆದಿದೆ ಎಂದರೆ ಊಹಿಸಿಕೊಳ್ಳಿ ಅವನೆಷ್ಟು ಮಹತ್ವಾಕಾಂಕ್ಷಿ ಎಂದು.

ಹೌದು, ಚಂದ್ರನಲ್ಲೂ ಮನೆಗಳನ್ನು ಕಟ್ಟಬೇಕು. ಅಲ್ಲೂ ಬಡಾವಣೆಗಳನ್ನು ನಿರ್ಮಿಸಬೇಕು. ಅಲ್ಲೂ ನಗರಗಳನ್ನು ಕಟ್ಟಬೇಕು ಎಂಬುದು ಮಾನವನ ಆಸೆಗಳಲ್ಲಿ ಒಂದು. ಈಗ ಆ ಆಸೆ ಪಕ್ವವಾಗುವ ಕಾಲ ಬಂದಿದೆ. ಚಂದ್ರನ ನೆಲದಲ್ಲಿ ಕಟ್ಟುವಂತಹ ಇಟ್ಟಿಗೆಗಳನ್ನು ಈಗ ಅಮೆರಿಕಾದ 'ವರ್ಜೀನಿಯಾ ಟೆಕ್ನಾಲಜೀಸ್' ಸಂಸ್ಥೆಯ ಕಾಲೇಜ್ ಆಫ್ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಈ ಕ್ರಾಂತಿಕಾರಿ ಶೋಧವನ್ನು ಮಾಡಿದ್ದಾರೆ. ಇನ್ನು ಚಂದ್ರನ ಮೇಲೆ ಮನೆಯನ್ನೂ ಕಟ್ಟಬಹುದು, ನಗರಗಳನ್ನೂ ನಿರ್ಮಿಸಬಹುದು.

ಇದರಲ್ಲೇನು ವಿಶೇಷ:


ಇದರಲ್ಲೇನಿದೆ ವಿಶೇಷ ಕೇಳಿದಿರಾ. ಖಂಡಿತ ಇದೆ. ನಾವು ಭೂಮಿಯ ಮೇಲೆ ಕಟ್ಟಡ ನಿರ್ಮಾಣಕ್ಕೆಂದು ಬಳಸುವ ಸಾಮಾನ್ಯ ಸಾಮಗ್ರಿಗಳನ್ನು ಬಳಸಿಕೊಂಡು ಚಂದ್ರನ ಮೇಲೆ ಕಟ್ಟಡಗಳನ್ನು ಕಟ್ಟಲಾಗದು. ಏಕೆಂದರೆ, ಭೂಮಿಯಂತೆ ಚಂದ್ರನಿಗೆ ವಾತಾವರಣ ಹಾಗೂ ಓಜೋನ್‌ನಂತಹ ಹಲವು ರಕ್ಷಣಾ ಪದರಗಳು ಇಲ್ಲದ ಕಾರಣ, ಸೂರ್ಯನ ಅತಿ ಶಕ್ತಿಶಾಲಿ, ಸೋಸಿಲ್ಲದ ಕಿರಣಗಳು ಚಂದ್ರನ ಮೇಲ್ಮೈನ ಮೇಲೆ ಬೀಳುತ್ತವೆ. ಹಾಗಾಗಿ ಚಂದ್ರನ ಮೇಲೆ ತಾಪಮಾನ ಹೆಚ್ಚು. ಎಷ್ಟೆಂದರೆ, ಕನಿಷ್ಟ ೧೨೪ ಡಿಗ್ರಿ ಸೆಲ್ಸಿಯಸ್. ಅದೇ ಭೂಮಿಯದಾದರೆ ಕೇವಲ ೧೨ ಡಿಗ್ರಿ ಸೆಲ್ಸಿಯಸ್. ವ್ಯತ್ಯಾಸ ತಿಳಿಯಿತಲ್ಲ. ಹಾಗಾಗಿ ಹಗಲಿನಲ್ಲಿ ಚಂದ್ರನ ಮೇಲೆ ಒಮ್ಮೆಲೇ ಫಟ್ಟನೆ ಪ್ರಾಣ ಹೋಗುವಷ್ಟು, ಎಂತಹ ವಸ್ತುಗಳೂ ತಾಪಮಾನಕ್ಕೆ ಬಿರುಕಾಗುವಂತಹ ಶಾಖವಿರುತ್ತದೆ. ಸವಾಲು ಇಷ್ಟು ಮಾತ್ರ ಅಲ್ಲ. ರಾತ್ರಿಯ ವೇಳೆ ಮೈನಸ್ ೨೩೩ ಡಿಗ್ರಿ ಸೆಲ್ಸಿಯಸ್ ಅಷ್ಟು ಕೆಳಕ್ಕೆ ಇಳಿಯುತ್ತದೆ. ನೀರು ಹೆಪ್ಪುಗಟ್ಟುವ ತಾಪಮಾನ ೦ ಡಿಗ್ರಿ ಸೆಲ್ಸಿಯಸ್. ಶಾಖ ಅದಕ್ಕೂ ಕಡಮೆಯಾದರೆ ಅದನ್ನು ನಂತರ ಮೈನಸ್‌ನಿಂದ ಎಣಿಸಲಾಗುವುದು. ಹಾಗಾಗಿ ಹಗಲಿನಲ್ಲಿ ಅತೀವ ಶಾಖವೂ, ರಾತ್ರಿಯಲ್ಲಿ ಅತೀವ ಶೀತವೂ ಇರುವುದರಿಂದ, ತಾಪಮಾನ ವೈಪರೀತ್ಯವನ್ನು ತಾಳಿಕೊಳ್ಳುವ ಶಕ್ತಿ ಸಾಧಾರಣ ವಸ್ತುಗಳಿಗೆ ಇರುವುದಿಲ್ಲ. ಹಗಲಲ್ಲಿ ಶಾಖದಿಂದ ಉಬ್ಬಿರುವ ವಸ್ತುಗಳು, ಕತ್ತಲಲ್ಲಿ, ಹಠಾತ್ತನೆ ಇಳಿಯುವ ತಾಪಮಾನದಿಂದ ಬೇಗ ಕುಗ್ಗಲಾರದೆ ಒಡೆದುಹೋಗುತ್ತದೆ. (ಬಿಸಿಯಾದ ಗಾಜಿನ ಬಲ್ಬ್‌ನ ಮೇಲೆ ನೀರು ಹಾಕಿದರೆ ಸಿಡಿಯುವ ಹಾಗೆ.) ಹಾಗಾಗಿ ಚಂದ್ರನ ಮೇಲೆ ಏನನ್ನೇ ಕಟ್ಟಬೇಕಾದರೂ, ಈ ಎಲ್ಲ ವೈಪರೀತ್ಯಗಳನ್ನೂ ತಡೆದುಕೊಳ್ಳುವಂತ ವಸ್ತು ಬೇಕೇ ಬೇಕು. ಅದಿದ್ದರೆ ಗೆದ್ದಂತೆ. ಈಗ ಗೆಲುವಿಗೆ ನಾವು ಹತ್ತಿರವಾಗಿದ್ದೇವೆ. ಕಾರಣ ಅದರ ಶೋಧ ಈಗ ಆಗಿದೆ.

ಅಚ್ಚಿಗೆ ಹೊಯ್ದು ಯಾವುದೇ ಆಕಾರಕ್ಕೆ ಬರುವಂತೆ ಈ 'ಚಂದ್ರ ಕಟ್ಟಡ' ಸಾಮಾಗ್ರಿಯನ್ನು ತಯಾರಿಸಲಾಗಿದೆ. ಅಲ್ಯೂಮಿನಿಯಂನ ಪುಡಿಯಲ್ಲಿ ಚಂದ್ರನ ಮೇಲೆ ಸಿಗುವ ಕಲ್ಲುಗಳಂಥ ವಸ್ತುಗಳನ್ನು ಪುಡಿಮಾಡಿ, ಈ ಅಲ್ಯೂಮಿನಿಯಂ ಪುಡಿಯ ಜತೆ ಬೆರೆಸಿ ತಯಾರಿಸಲಾಗಿದೆ. ಇಟ್ಟಿಗೆಯ ಆಕಾರಕ್ಕೆ, ತಾರಸಿಗೆ ಹಾಕುವ ಕಲ್ನಾರ್ ಶೀಟ್ ಮಾದರಿಗೆ ಇದನ್ನು ತಯಾರಿಸಿಕಳ್ಳಬಹುದು. ಹೀಗೆ ಪುಡಿಗಳನ್ನು ಚಂದ್ರನಿಗೆ ಕೊಂಡೆಯ್ದು ಅಲ್ಲಿ ಮಿಶ್ರಣ ಮಾಡಿ, ವಿಶೇಷ ಅಂಟಿನ ಮೂಲಕ ಬಂಧಿಸಿ ಮನೆಗಳನ್ನು ಕಟ್ಟಬಹುದು ಎಂದು ತೋರಿಸಿಕೊಟ್ಟಿದ್ದಾರೆ.

ಕಾಲೇಜಿನ ವಸ್ತು ವಿಜ್ಞಾನ ಮತ್ತು ಎಂಜಿನಿಯರಿಂಗ್ ಹಾಗೂ ಹ್ಯಾಂಪ್ಟನ್‌ನ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಯ ಪ್ರಾಧ್ಯಾಪಕಿ ಕ್ಯಾಥರೀನ್ ಲೋಗಾನ್ ಹಾಗೂ ೭ ವಿದ್ಯಾರ್ಥಿಗಳು ಈ ಮಹತ್ವ ಸಂಶೋಧನೆಯನ್ನು ಮಾಡಿದ್ದಾರೆ. ಸೈನ್ಯದಲ್ಲಿ ಬಾಂಬ್‌ಗಳ ಒಡೆತವನ್ನು ತಡೆದುಕೊಳ್ಳಲು ಅಲ್ಯೂಮಿನಿಯಂ ಹಾಗೂ ಪಿಂಗಾಣಿ ಪುಡಿಯ ಮಿಶ್ರಣದಿಂದ ತಯಾರಿಸಿದ್ದ ಕವಚಗಳು ಅತಿ ಗಟ್ಟಿಯಾಗಿ ಇರುತ್ತಿದ್ದ ಕಾರಣ, ಇಂಥಹ ವಸ್ತುವನ್ನೇ ಏಕೆ ಚಂದ್ರನಲ್ಲಿ ಕಟ್ಟಡ ನಿರ್ಮಾಣಕ್ಕೆ ಬಳಸಬಾರದು ಎಂಬ ಯೋಚನೆ ಬಂದಿತಂತೆ. ಹಾಗಾಗಿ ಲೋಗಾನ್ ಆಕೆಯ ವಿದ್ಯಾರ್ಥಿ ತಂಡಗಳೊಂದಿಗೆ ವಿಶ್ವದ ನಾನಾ ಭಾಗಗಳ ನಿಷ್ಕ್ರಿಯ ಜ್ವಾಲಾಮುಖಿಗಳಿಗೆ ತೆರಳಿ, ಅಲ್ಲಿ ರಾಶಿ ರಾಶಿಯಾಗಿ ಬಿದ್ದಿರುತ್ತಿದ್ದ ಜ್ವಾಲಾಮುಖಿ ಬೂದಿಯನ್ನು ಸಂಗ್ರಹಿಸಿ, ಅದನ್ನು ಸಂಸ್ಕರಿಸಿ ವಿಶೇಷ ಪುಡಿಯನ್ನು ತಯಾರಿಸಿದರು. ಜ್ವಾಲಾಮುಖಿಯ ಬೂದಿಯಲ್ಲಿ ಭೂಗರ್ಭದ ನಾನಾ ರೀತಿಯ ಲೋಹಗಳು ಸೇರಿ ಹೋಗಿರುವುದರಿಂದ ಅದಕ್ಕೆ ವಿಶೇಷ ಶಾಖ ತಡೆಯುವ ಇರುತ್ತದೆ ಎಂದು ಲೆಕ್ಕ ಮಾಡಲಾಯಿತು. ಹಾಗೆ ಸಂಗ್ರಹಗೊಂಡ ಪುಡಿಯನ್ನು ಅಲ್ಯೂಮಿನಿಯಂ ಪುಡಿಯೊಂದಿಗೆ ಬೆರೆಸಿ, ವಿಶೇಷ ಅಂಟೊಂದರ ಸಹಾಯದಿಂದ ಅಚ್ಚುಗಳಿಗೆ ಹಾಕಿ ಇಟ್ಟಿಗೆಗಳನ್ನು ತಯಾರಿಸಲಾಯಿತು. ಅದನ್ನು ವಿವಿಧ ತಾಪಮಾನಗಳಲ್ಲಿ ಪರೀಕ್ಷಿಸಿ ಯಶಸ್ವಿಯಾದ ಬಲಿಕ ಅದನ್ನು ಚಂದ್ರನಲ್ಲಿ ಬಳಸಲು ಸಾಧ್ಯ ಎಂಬ ತೀರ್ಮಾನಕ್ಕೆ ಬರಲಾಯಿತು. ಹೀಗೆ ಯಾವ ಆಕಾರ ಬೇಕೋ ಆ ಆಕಾರದ ಅಚ್ಚುಗಳನ್ನು ತಯಾರಿಸಿಕೊಂಡು, ಅದರಲ್ಲಿ ಬೇಕಾದ ಗಾತ್ರದ, ಆಕಾರದ ಇಟ್ಟಿಗೆಗಳನ್ನು ಸುಲಭವಾಗಿ ಮಾಡಿಕಳ್ಳಬಹುದು. ಎಂದು ಪ್ರಾಯೋಗಿಕವಾಗಿಯೂ ತೋರಿಸಲಾಯಿತು. ಅಲ್ಲದೆ, ಗರಿಷ್ಟ ೨,೭೦೦ ಡಿಗ್ರಿ ಫ್ಯಾರನ್‌ಹೀಟ್‌ಗೆ ಶಾಖವನ್ನು ಏರಿಸಿ ಪರೀಕ್ಷಿಸಲಾಗಿ, ಅದು ಭದ್ರವಾಗಿ ಅಸ್ತಿತ್ವ ಉಳಿಸಿಕೊಂಡ ಕಾರಣ, ಈಗ ಚಂದ್ರನ ಮೇಲೆ ಕಟ್ಟಡ ಕಟ್ಟುವುದು ಇದರಿಂದ ಸಾಧ್ಯ ಎಂಬ ನಿರ್ಧಾರಕ್ಕೆ ಬರಲಾಗಿದೆ. ಇದಕ್ಕೆ ನಾಸಾ ಸೇರಿದಂತೆ, ಹಲವು ವಿಶ್ವವ್ಯಾಪಿ ಬಾಹ್ಯಾಕಾಶ ಸಂಸ್ಥೆಗಳು ತಮ್ಮ ಹಸಿರು ನಿಶಾನಯನ್ನೂ ಸೂಚಿಸಿವೆ.

ಒಮ್ಮೆ ಮನೆಯನ್ನು ಈ ವಸ್ತುಗಳನ್ನು ಬಳಸಿ ಕಟ್ಟಿದ ಮೇಲೆ, ಮನೆಯ ಒಳಗೆ ಮನುಷ್ಯನಿಗೆ ಬೇಕಾದ ತಾಪಮಾನವನ್ನು ಹವಾನಿಯಂತ್ರಣ ಯಂತ್ರಗಳ ಮೂಲಕ ನಿಯಂತ್ರಿಸಬಹುದು. ಅದಕ್ಕೆ ಬೇಕಾಗುವ ವಿದ್ಯುತ್ ಸಹ, ಅಲ್ಲಿನ ಅಪಾರ ಸೌರಶಕ್ತಿಯಿಂದ ಸಿಗುತ್ತದೆ.


ಮತ್ತೆ ಕನಸಿನೆಡೆಗೆ:


ಈಗ ಮತ್ತೆ ಮನುಷ್ಯ ಕನಸಿನೆಡೆಗೆ ತೆರಳಿದ್ದಾನೆ. ಕಟ್ಟಡಗಳನ್ನು ಕಟ್ಟುವಷ್ಟು ಮೊತ್ತದ ಸಾಮಗ್ರಿಗಳನ್ನು ಭೂಮಿಯಿಂದ ಚಂದ್ರನೆಡೆಗೆ ಸಾಗಿಸುವುದು ತುಂಬಾ ಕಷ್ಟ. ಹಾಗಾಗಿ ಕೇವಲ ತಂತ್ರಜ್ಞಾನವನ್ನು ಮಾತ್ರ ಕೊಂಡೊಯ್ದು, ಚಂದ್ರನ ಮೇಲ್ಮೈ ಮೇಲೆ ಇರುವ ಕೋಟ್ಯಾಂತರ ಜ್ವಾಲಾಮುಖಿಗಳಲ್ಲಿ (ಚಂದ್ರನ ಮೇಲೆ ಭೂಮಿಗಿಂತ ಹೆಚ್ಚು ಜ್ವಾಲಾಮುಖಿಗಳಿವೆ) ಸಿಗುವ ಜ್ವಾಲಾಮುಖಿ ಬೂದಿಯನ್ನು ಸಂಸ್ಕರಿಸಿ, ಖನಿಜ ಸಂಪತ್ತನ್ನು ಗುರುತಿಸಿ, ಅಲ್ಲಿಯೇ ಕಚ್ಛಾ ವಸ್ತುಗಳನ್ನು ಸಿದ್ಧಪಡಿಸಿಕೊಳ್ಳುವ ಯೋಚನೆಯಲ್ಲಿ ಮನುಷ್ಯನಿದ್ದಾನೆ. ಭಾರತದಂತ ಆರ್ಥಿಕವಾಗಿ ಸುಸ್ಥಿರವಾಗಿರದ ರಾಷ್ಟ್ರಗಳೇ ಚಂದ್ರಯಾನದಂತಹ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತಿರುವಾಗ, ಗಣಿಗಾರಿಕೆ, ವಿಸ್ತರಿತ ಚಂದ್ರನ ಮೇಲ್ಮೈ ಸಂಶೋಧನೆಗಳು ಮುಂದುವರೆದ ರಾಷ್ಟ್ರಗಳಿಗೆ ದೊಡ್ಡ ವಿಷಯವಲ್ಲ. ಹಾಗಾಗಿ ಚಂದ್ರನ ಮೇಲೆ ಮನೆ ಕಟ್ಟುವ ಕನಸು ದೂರವಲ್ಲ. ಹಾಗಾಗಿ ಈಗ ಚಂದ್ರನಲ್ಲಿ ಎಷ್ಟು ಎಕರೆ ಜಾಗ ಬೇಕೋ ಬುಕ್ ಮಾಡಿಕೊಳ್ಳಲು ಶುರುಮಾಡಿ!