ಶನಿವಾರ, ನವೆಂಬರ್ 29, 2008

ಭೂಕಂಪನಕ್ಕೆ ಗುಡ್‌ಬೈ ಹೇಳಿ!



೨೦೦೮ ರ ಮೇ ತಿಂಗಳು. ಸಮಯ ೨ ಗಂಟೆ ೨೮ ನಿಮಿಷ. ಚೈನಾದ ಸೆಕ್ವಾನ್ ಪ್ರಾಂತ್ಯದಲ್ಲಿ ಅಂದು ಎಲ್ಲವೂ ಸಹಜವಾಗಿರಲಿಲ್ಲ. ಇಡೀ ಜಗತ್ತೇ ಮೌನವಾದಂತೆ ಭಾಸ. ಹಕ್ಕಿಗಳ ಕಲರವವಿಲ್ಲ, ಗಾಳಿ ಬೀಸುತ್ತಿರಲಿಲ್ಲ. ಗಿಡಮರಗಳು ಬರೆದ ಚಿತ್ರವೇನೋ ಎಂಬಷ್ಟು ಸ್ಥಬ್ಧವಾಗಿ ನಿಂತಿದ್ದವು. ತಕ್ಷಣವೇ ಬಂದೆರಗಿತು ಅನಿರೀಕ್ಷಿತ ಭೂಕಂಪನ!

ಭೂಕಂಪನದ ಶಕ್ತಿ ಎಷ್ಟು ತೀವ್ರವಾಗಿತ್ತೆಂದರೆ, ಸುಮಾರು ೧೨೦೦ ಹೀಲಿಯಂ ಬಾಂಬ್‌ಗಳನ್ನು ಒಟ್ಟಿಗೆ ಸಿಡಿಸಿದಾಗ ಉತ್ಪತ್ತಿಯಾಗುವ ಶಕ್ತಿಗೆ ಸಮನಾಗಿತ್ತು. ಸುಮಾರು ೨೮೦ ಕಿಲೋ ಮೀಟರ್ ವ್ಯಾಸದ ಪ್ರದೇಶ ಇನ್ನಿಲ್ಲವೇನೋ ಎಂಬಂತೆ ನಾಶವಾಯಿತು. ಎಲ್ಲ ನಗರಗಳೂ ನಾಶವಾದವು. ೭೦ ಸಾವಿರ ಮಂದಿ ಪ್ರಾಣ ಕಳೆದುಕೊಂಡರು. ೨೦ ಸಾವಿರ ಮಂದಿ ಕಾಣೆಯಾದರು. ೮ ಮಿಲಿಯನ್ ಮಂದಿ ಮನೆಗಳನ್ನು ಕಳೆದುಕೊಂಡು ಬೀದಿಗೆ ಬಿದ್ದರು. ವಿಪರ್ಯಾಸವೆಂದರೆ ಆಗ ಅಲ್ಲಿ ಒಂದೇ ಒಂದು ರಸ್ತೆಯೂ ಉಳಿದಿರಲಿಲ್ಲ!

೨ ತಿಂಗಳು ನೀರವ ಮೌನ. ಕಾಣೆಗೊಂಡವರನ್ನು ಸತ್ತವರ ಸಾಲಿಗೆ ಸೇರಿಸಲಾಯಿತು. ನಂತರ ಅಲ್ಲಿಗೆ ಬಂದವರು. ಚೈನಾದ ಪ್ರಸಿದ್ಧ ಮಾಂಟ್ ರಿಯಲ್ ವಿಶ್ವವಿದ್ಯಾನಿಲಯ ಎಕೋಲೆ ಪಾಲಿಟೆಕ್ನಿಕ್ ಶಾಲೆ ವಿಜ್ಞಾನಿ ಜೀ ಶೋಚೆಂಗ್, ಸಮೀಕ್ಷೆಗಾಗಿ. ಅವರಿಗೆ ಕಂಡದ್ದು ಮುರಿದು ಬಿದ್ದಿದ್ದ ರಸ್ತೆ, ಸೆತುವೆಗಳು. ಶಾಲೆಗಳು ಶವದ ಮನಗಳಾಗಿದ್ದವು. ಎಲ್ಲಿ ನೋಡಿದರೂ ಶವಗಳು. ಸಹಿಸಲಾರದ ವಾಸನೆ. ಕಳೆದ ೩೦೦ ವರ್ಷಗಳ ಇತಿಹಾಸದಲ್ಲೇ ಸಂಭವಿಸದ ಈ ರೀತಿಯ ಭೂಕಂಪನ ಸಂಭವಿಸಬೇಕೆ? ಬೇಡ ಎಂದರು ಶೋಚೆಂಗ್. ಅದಕ್ಕಾಗಿ ಭೂಕಂಪನವನ್ನೇ ತಪ್ಪಿಸಬಲ್ಲ, ಮುಂದಾಗುವ ಭೂಕಂಪನವನ್ನು ಪತ್ತೆ ಹಚ್ಚುವ ಅದ್ಭುತ ತಂತ್ರಜ್ಞಾನವನ್ನು ಕಂಡುಹಿಡಿದರು.


ಏನದು ತಂತ್ರಜ್ಞಾನ?: ಚೈನಾದಲ್ಲಿ ಜಗತ್ತಿನಲ್ಲೇ ಅತಿ ಹೆಚ್ಚು ಭೂಕಂಪನಗಳು ಸಂಭಿವಿಸುತ್ತವೆ. ಹಾಗಾಗಿ ಚೈನಾ ಸರ್ಕಾರ ಮುಂದಾಗುವ ಭೂಕಂಪನಗಳನ್ನು ಪತ್ತೆಹಚ್ಚಲು ಜಿಪಿಎಸ್ (ಗ್ಲೋಬಲ್ ಪೊಸಿಷನಿಂಗ್ ಸಿಸ್ಟಂ) ಅನ್ನು ಅವಲಂಬಿಸಿದೆ. ಜಿಪಿಎಸ್ ಎಂದರೆ ನಾವು ಭೂಮಿಯ ಮೇಲೆ ಕುಳಿತಲ್ಲೇ ಭೂಮಿಯ ಕಕ್ಷೆಯಲ್ಲಿ ಸುತ್ತುತ್ತಿರುವ ಉಪಗ್ರಹದ ಮೂಲಕ ನಮ್ಮ ನೆಲೆಯನ್ನು ಕಂಡುಕೊಳ್ಳುವ ವಿಧಾನ. ನಮ್ಮ ನೆಲೆಯನ್ನು ಭೂಮಿಯ ಮೇಲೆ ಕೇವಲ ೨ ಸೆಂಟಿ ಮೀಟರ್ ಎತ್ತರದಷ್ಟು ನಿಖರವಾಗಿ ಗುರುತಿಸಬಲ್ಲ ಶಕ್ತಿ ಈ ವಿಧಾನಕ್ಕಿದೆ. ವಾಹನಗಳಲ್ಲಿ ಹಾಗೂ ದೇಶದ ರಕ್ಷಣಾ ವ್ಯವಸ್ಥೆ ಭೂಪಟಗಳನ್ನು ರಚಿಸಿಕೊಳ್ಳಲು ಹಾಗೂ ನಾವು ನಿಂತ ಜಾಗವನ್ನು ಗುರುತಿಸಿಕೊಳ್ಳಲು ಇದು ಹೆಚ್ಚಾಗಿ ಬಳಕೆಯಾಗುತ್ತದೆ. ಈ ತಂತ್ರಜ್ಞಾನವನ್ನು ಬಳಸಿಕೊಂಡು ಚನಾ ಹವಾಮಾನ ಇಲಾಖೆಯ ವಿಜ್ಞಾನಿಗಳು, ಭೂಖಂಡಗಳ ಪದರಗಳ ನೆಲೆಯನ್ನು ಗಮನಿಸುತ್ತಿದ್ದರು. ವರ್ಷಕ್ಕೆ ೨ ಮಿಲಿ ಮೀಟರ್‌ನಷ್ಟು ನೆಲೆಯಲ್ಲಿ ವ್ಯತ್ಯಾಸವಾದರೂ ಆ ಪ್ರಾಂತ್ಯಕ್ಕೆ ಎಚ್ಚರಿಕೆ ಗಂಟೆಯನ್ನು ಮೊಳಗಿಸಿ, ಹುಷಾರಾಗಿರಿ ಎನ್ನಲಾಗುತ್ತಿತ್ತು. ಆದರೆ ವಾಸ್ತವವಾಗಿ ಜಿಪಿಎಸ್ ನೀಡುತ್ತಿದ್ದ ಮಾಹಿತಿಗೂ, ಸತ್ಯಾಂಶಕ್ಕೂ ವ್ಯತ್ಯಾಸವಿತ್ತು. ೨ ಮಿ.ಮಿ ಎನ್ನುವ ಮಾಹಿತಿ, ವಾಸ್ತವದಲ್ಲಿ ೨ ಸೆಂ.ಮಿ ಆಗಿರುತ್ತಿತ್ತು. ಇದರಿಂದ ನಿಖರ ಮಾಹಿತಿ ಸಿಗಲಾರದು ಎಂಬ ಕಾರಣಕ್ಕೆ ಶೋಚೆಂಗ್ ಈ ಹೊಸ ತಂತ್ರಜ್ಞಾನ ಪತ್ತೆ ಮಾಡಿದ್ದಾರೆ.

ಈ ತಂತ್ರಜ್ಞಾನ ಬಹು ಸುಲಭ. ಶೋಚೆಂಗ್ ಸುಮಾರು ೭೫ ಮಿಲಿಯನ್ ಡಾಲರ್ ವೆಚ್ಚದಲ್ಲಿ ೩ ಕಿಲೋಮೀಟರ್ ಆಳದ ೩ ಬಾವಿಗಳನ್ನು ಭೂಮಿಯಲ್ಲಿ ಕೊರೆದು, ಕೆಲವು ಸೂಕ್ಷ್ಮ ವೈಜ್ಞಾನಿಕ ಸಾಧನಗಳನ್ನು ಅಳವಡಿಸಿದ್ದಾರೆ. ಲಕ್ಷಾಂತರ ವರ್ಷಗಳಿಂದ ಹಲವು ಭೂಕಂಪನಗಳನ್ನು ಕಂಡಿರುವ ಭೂಮಿಯನ್ನು ಆ ಸಾಧನಗಳು ಅಧ್ಯಯನ ಮಾಡುತ್ತವೆ. ಅದರಲ್ಲಿ ಭೂಕಂಪನ ಅಳೆಯುವ ರಿಕ್ಟರ್ ಮಾಪಕದಿಂದ ಹಿಡಿದು, ಭೂಕಂಪಕ್ಕೆ ಮುನ್ನ ಭೂಮಿ ಒಸರುವ ರಾಸಾಯನಿಕ ವಸ್ತುಗಳನ್ನು ಪತ್ತೆ ಪಚ್ಚುವ, ದೂರದ ನಿಯಂತ್ರಣಾ ಕೇಂದ್ರಕ್ಕೆ ಮಾಹಿತಿ ರವಾನಿಸುವ ರೇಡಿಯೋ ಉಪಕರಣಗಳು, ನೆಟ್‌ವರ್ಕ್ ಸಾಧನಗಳಿರುತ್ತವೆ. ಭೂಮಿಯ ತಾಪ ಹಾಗೂ ದ್ರವವಸ್ತುಗಳ ಸಂಯೋಜನೆ, ವ್ಯತ್ಯಾಸಗಳನ್ನು ಅವು ಗುರುತಿಸಿ, ಸುಮಾರು ೧ ತಿಂಗಳಿಗೂ ಮುನ್ನವೇ ಸಂಭವಿಸುವ ಭೂಕಂಪನದ ಬಗ್ಗೆ ಎಚ್ಚರಿಕೆಯನ್ನು ನೀಡುತ್ತವೆ. ಹಾಗಾಗಿ ಇಂತಹ ಸಾಧನಗಳನ್ನು ಅತಿ ಹೆಚ್ಚು ಭೂಕಂಪನ ಸಂಭವಿಸುವ ಸ್ಥಳಗಳಲ್ಲಿ ಪ್ರತಿಷ್ಠಾಪಿಸಿದರೆ ಸಾಕಷ್ಟು ಸಮಸ್ಯೆಗಳನ್ನು ತಡೆಗಟ್ಟಬಹುದು ಎಂಬುದು ಶೋಚೆಂಗ್ ವಾದ.

ಅಲ್ಲದೆ ಭೂಕಂಪನ ಸಂಭವಿಸುವುದಕ್ಕೆ ೧ ತಿಂಗಳ ಕಾಲಾವಕಾಶ ಇರುವುದರಿಂದ ನಗರಗಳನ್ನು ಖಾಲಿ ಮಾಡಿ, ಜನರ ಪ್ರಾಣ, ಆಸ್ತಿ - ಪಾಸ್ತಿ ಉಳಿಸಲೂ ಸಮಯ ಸಿಗುತ್ತದೆ ಎನ್ನುತ್ತಾರೆ.

ಶುಕ್ರವಾರ, ನವೆಂಬರ್ 21, 2008

ಜೀವ ಕಣ, ದೇವ ಕಣ!


ಸ್ಟೆಮ್ ಸೆಲ್‌ನಿಂದ ಸಾಧ್ಯ ಲಿವರ್ ಪುನರ್ ಸೃಷ್ಟಿ

ಸ್ಟೆಮ್ ಸೆಲ್‌ಗಳ ಬಗ್ಗೆ ನೀವೀಗಾಗಲೇ ಕೇಳಿರಬಹುದು. ಹೊಕ್ಕಳ ಬಳ್ಳಿಯಿಂದ ತೆಗೆಯುವ ಜೀವಕೋಶಗಳಿಂದ ದೇಹದ ಎಲ್ಲ ಅಂಗಾಂಗಳನ್ನೂ ರಚಿಸಲು ಸಾಧ್ಯವಾಗುತ್ತದೆ ಎಂದು ವಿಜ್ಞಾನಿಗಳ ಜಗತ್ತಿಗೆ ತೋರಿಸಿಕೊಟ್ಟಾಗ ದೊಡ್ಡ ಸಂಚಲನೆಯೇ ಉಂಟಾಗಿತ್ತು. ಈಗ ಸ್ಟೆಮ್ ಸೆಲ್ ಮತ್ತೆ ಸುದ್ದಿ ಮಾಡಿದೆ. ಸ್ಟೆಮ್ ಸೆಲ್‌ನ್ನು ಬಳಸಿಕೊಂಡು ಗಾಯಗೊಂಡ ಲಿವರ್‌ನ್ನು ಪುನರ್‌ಸೃಷ್ಟಿ ಮಾಡುವ ಕೆಲಸದಲ್ಲಿ ವಿಜ್ಞಾನಿಗಳು ಸಫಲರಾಗಿದ್ದಾರೆ!

ಅತ್ಯಂತ ಆಶ್ಚರ್ಯಕಾರಿ ಅಂಶವೇನೆಂದರೆ, ದೇಹದಲ್ಲಿರುವ, ಗಾಯಗೊಂಡರೂ ತನಗೆ ತಾನೆ ಮತ್ತೆ ಪುನರ್ ರಚಿತವಾಗಬಲ್ಲ ಶಕ್ತಿಯಿರುವುದು ಲಿವರ್‌ಗೆ ಮಾತ್ರ. ಲಿವರ್ ಕೋಶಗಳು ಮಾತ್ರ, ಮತ್ತೆ ಉತ್ಪತ್ತಿಯಾಗಿ ಗಾಯಗೊಂಡ ಭಾಗವನ್ನು ಸರಿಪಡಿಸಿಕೊಳ್ಳುತ್ತದೆ. ಲಿವರ್‌ನ್ನು ಬಿಟ್ಟರೆ ದೇಹದಲ್ಲಿನ, ಚರ್ಮ ಕೋಶಗಳು ಪುನರುತ್ಪತ್ತಿಗೊಳ್ಳುವ ಶಕ್ತಿ ಹೊಂದಿವೆ. ದಿನವೊಂದಕ್ಕೆ ನಾವು ನಮ್ಮ ಚರ್ಮದಿಂದ ಕಳೆದುಕಳ್ಳುವ ಜೀವಕೋಶಗಳ ಸಂಖ್ಯೆ ಬಿಲಿಯನ್‌ಗಳಿಗೂ ಮೀರುತ್ತದೆ. ನಮ್ಮ ಚರ್ಮದ ಮೇಲೆ ಸುಮ್ಮನೆ ಕೈ ಸವರಿದರೂ ಎಷ್ಟೋ ಕೋಶಗಳು ನಷ್ಟವಾಗುತ್ತವೆ. ಆದರೆ ಕೊಂಚವೇ ಸಮಯದಲ್ಲಿ ಅವು ಪುನರುತ್ಪತ್ತಿಗೊಳ್ಳುತ್ತವೆ. ಹಾಗೆಯೇ ಲಿವರ್ ಕೋಶಗಳೂ ಪುನರುತ್ಪತ್ತಿಗೊಳ್ಳುವ ಶಕ್ತಿ ಹೊಂದಿವೆ. ಹಾಗಾಗಿ ಕುಡಿತ ಹಾಗೂ ಇತ್ಯಾದಿ ಕಾರಣಗಳಿಂದಾಗಿ ಲಿವರ್‌ಗೆ ಘಾಸಿಯಾದರೆ ಕೆಲವು ತಿಂಗಳುಗಳಲ್ಲಿ ಲಿವರ್ ಸರಿಹೊಂದುತ್ತದೆ. ಆದರೆ ಅತಿಯಾಗಿ ಘಾಸಿಯಾಗಿದ್ದರೆ?!

ಆಗ ಲಿವರ್ ವಾಸಿಯಾಗುವುದು ಅತಿ ನಿಧಾನ. ಆಗ ದೇಹಕ್ಕೆ ಬೇಕಾದ ಜೀವರಸಗಳು ಲಿವರ್‌ನಿಂದ ಪೂರೈಕೆಯಾಗದೆ ವ್ಯಕ್ತಿ ಸಾಯುತ್ತಾನೆ. ಅಲ್ಲದೆ, ವ್ಯಕ್ತಿಯ ಲಿವರ್ ಆಗಲೇ ಸಾಕಷ್ಟು ಬಾರಿ ಘಾಸಿಗೊಂಡು ವಾಸಿಯಾಗಿದ್ದು, ಮತ್ತೆ ಘಾಸಿಯಾದರೆ ವಾಸಿಯಾಗುವುದು ಕಷ್ಟವಾಗುತ್ತದೆ. ಈ ಸಮಸ್ಯೆಗೆ ಈಗ ಪರಿಹಾರ ಸಿಕ್ಕಿದೆ ಸ್ಟೆಮ್ ಸೆಲ್ (ಲೇಖನದ ಕೊನೆಯಲ್ಲಿ ಸ್ಟೆಮ್ ಸೆಲ್‌ನ ವ್ಯಾಖ್ಯಾನವಿದೆ) ಗಳನ್ನು ಬಳಸಿ ಲಿವರ್‌ನ್ನು ಪುನರ್ ಸೃಷ್ಟಿ ಮಾಡುವ ವಿಧಾನವನ್ನು ವಿಜ್ಞಾನಿಗಳು ಸಂಶೋಧಿಸಿದ್ದಾರೆ.

ಹೇಗಿದು ಸಾಧ್ಯ: ಲಿವರ್ ಸಮಸ್ಯೆಗಳ ಸಂಶೋಧನೆಯಲ್ಲಿ ತೊಡಗಿದ್ದ ಅಮೆರಿಕಾದ ಪೆನ್ಸಿಲ್‌ವೇನಿಯಾದ ವಿಜ್ಞಾನಿಗಳು ಸ್ಟೆಮ್ ಸೆಲ್‌ನ ಮೂಲಕ ದೇಹದ ಅತಿ ಹಳೆಯ ಲಿವರ್ ಕೋಶವನ್ನು ಪತ್ತೆ ಮಾಡಿ, ನಕಲು ಮಾಡುವ ಸಾಧ್ಯತೆಗಳನ್ನು ತೋರಿಸಿಕೊಟ್ಟಿದ್ದಾರೆ. ಈ ಮೂಲಕ ಲಿವರ್ ಕೋಶಗಳನ್ನು ಉತ್ಪಾದಿಸಿ, ಗಾಯಗೊಂಡ ಲಿವರ್‌ಗೆ ಹೊಸ ಜೀವಕೋಶಗಳನ್ನು ಕಸಿ ಮಾಡುವ ಮೂಲಕ ವ್ಯಕ್ತಿಗೆ ಜೀವದಾನ ಮಾಡಲು ಮಾರ್ಗ ಹಾಕಿಕಟ್ಟಿದ್ದಾರೆ. ಅಮೆರಿಕಾ ಲಿವರ್ ಫೌಂಡೇಶನ್ ಪ್ರಕಾರ, ಈ ಸುದ್ದಿಯನ್ನು ಕೇಳಿ ಈಗಾಗಲೇ ೧೭ ಸಾವಿರ ಅಮೆರಿಕನ್ನರು ಲಿವರ್ ದುರಸ್ತಿಗಾಗಿ ಮಾಡಿಸಿಕೊಳ್ಳಲು ಕಾದು ನಿಂತಿದ್ದಾರಂತೆ!

ಒಬ್ಬ ಆರೋಗ್ಯವಂತ ವ್ಯಕ್ತಿಯ ಲಿವರ್‌ನಲ್ಲಿ, ಲಿವರ್ ಜೀವಕೋಶಗಳು ಕ್ರಮಬದ್ಧವಾಗಿ ಜೋಡಿತಗೊಂಡಿದ್ದು, ಲಿವರ್‌ನ ಆಕಾರ, ಗಾತ್ರಗಳನ್ನು ಸರಿ ಕ್ರಮದಲ್ಲಿ ಇರುವಂತೆ ಕಾಪಾಡಿಕೊಳ್ಳುತ್ತಿರುತ್ತವೆ. ಇಂತಹ ಸಮಯದಲ್ಲಿ ಅಪಘಾತವಾಗಿ ಲಿವರ್‌ಗೆ ಬಾಹ್ಯ ಘಾಸಿಯುಂಟಾಗಿ ಕೋಶ ಹಾನಿಯಾದಾಗ ಲಿವರ್ ತನಗೆ ತಾನೆ ಸರಿಹೊಂದುತ್ತದೆ. ಆದರೆ ಲಿವರ್‌ನ ಹೆಚ್ಚು ಭಾಗ ಘಾಸಿಗೊಂಡಿದ್ದಲ್ಲಿ ವಾಸಿಯಾಗುವುದು ಕಷ್ಟ. ಆಗ ಈ ಸ್ಟೆಮ್‌ಗಳ ಸಹಾಯ ಬೇಕೇ ಬೇಕು ಎನ್ನುತ್ತಾರೆ ಪೆನ್ಸಿಲ್‌ವೇನಿಯಾ ವಿಶ್ವವಿದ್ಯಾನಿಲಯದ ಗ್ಯಾಸ್ಟ್ರೋಎಂಟೆರಾಲಜಿ (ಪಚನ ಕ್ರಿಯೆ ಸಂಬಂಧಿತ ಅಂಗಾಂಗಗಳ ಅಧ್ಯಯನ) ವಿಭಾಗದ ಸಹಾಯಕ ಪ್ರಾಧ್ಯಾಪಕಿ ಲಿಂಡಾ ಗ್ರೀನ್‌ಬಾಮ್.

ಲಿವರ್ ತನಗೆ ತಾನೆ ವಾಸಿಯಾಗುವಾಗ ಉತ್ಪತ್ತಿಯಾಗುವ ಕೋಶಗಳನ್ನು ಸಂಗ್ರಹಿಸಿ, ಅಧ್ಯಯನ ಮಾಡಿ, ಅವುಗಳನ್ನು ಹೋಲುವ ಕೋಶಗಳನ್ನು ಸ್ಟೆಮ್ ಸೆಲ್‌ಗಳಿಂದ ಉತ್ಪಾದಿಸಲಾಗುತ್ತದೆ. ೭ ಸಂಶೋಧಕರನ್ನು ಒಳಗೊಂಡ ಲಿಂಡಾ ಅವರ ತಂಡವು ಈಗಾಗಲೇ ಇಲಿಗಳ ಮೇಲೆ ಈ ಸಂಶೋಧನೆಯನ್ನು ಪ್ರಯೋಗಿಸಿದ್ದು, ಲಿವರ್ ಕೋಶಗಳನ್ನು ಪೂರ್ಣ ಪ್ರಮಾಣದಲ್ಲಿ ಸೃಷ್ಟಿಸಲು ಯಶಸ್ವಿಯಾಗಿದ್ದಾರೆ. ಭವಿಷ್ಯದಲ್ಲಿ ಲಿವರ್ ಬದಲಾವಣೆಗೂ ಇದು ದಾರಿ ತೋರಿಸುತ್ತದೆ ಎಂಬುದು ಇವರ ಬಲವಾದ ವಾದ. ವ್ಯಕ್ತಿಯ ಘಾಸಿಗೊಂಡ ಲಿವರ್‌ನಿಂದ ಕೋಶಗಳನ್ನು ತೆಗೆದುಕೊಂಡು ಅವನ್ನು ಸ್ಟೆಮ್ ಸೆಲ್ ಮೂಲಕ ಅಭಿವೃದ್ಧಿ ಪಡಿಸಿ, ಸಂಪೂರ್ಣ ಲಿವರ್‌ನ್ನೇ ಬಾಹ್ಯವಾಗಿ ಸೃಷ್ಟಿಸಿ, ನಂತರ ದೇಹದೊಳಗೆ ಸೇರಿಸಿ ಕಸಿ ಮಾಡುವ ಕಾಲವೂ ಹೆಚ್ಚಿನ ದಿನವಿಲ್ಲ ಎಂದು ಲಿಂಡಾ ಹೇಳುತ್ತಾರೆ.

ಏನಿದು ಸ್ಟೆಮ್ ಸೆಲ್?!

ಸ್ಟೆಮ್ ಸೆಲ್‌ಗಳ ಮಹತ್ವ ಅರಿತಿರುವವರು, ಇವನ್ನು ದೇವ ಕಣಗಳು ಎನ್ನಬಹುದು. ಮಾಯಾ ಜೀವಕೋಶಗಳೂ ಎನ್ನಬಹುದು! ದೇಹದ ಎಲ್ಲ ಅಂಗಾಗಳಲ್ಲೂ ಕಂಡು ಬರುವ, ಆದರೆ ಕೇವಲ ಹೊಕ್ಕಳ ಬಳ್ಳಿಯಲ್ಲಿ ಮಾತ್ರ ಸಂಗ್ರಹಿಸಲು ಸಿಗುವ ಅದ್ಭುತ ಜೀವಕೋಶಗಳಿವು.

ಈ ಕೋಶಗಳಿಗೆ ದೇಹದ ಯಾವುದೇ ಅಂಗಾಂಗವಾಗಿ ಪರಿವರ್ತಿತಗೊಳ್ಳಬಲ್ಲ ಶಕ್ತಿಯಿರುತ್ತದೆ. ೧೯೬೦ ರಲ್ಲಿ ಕೆನಡಾ ದೇಶದ ವಿಜ್ಞಾನಿಗಳಾದ ಅರ್ನೆಸ್ಟ್ ಎ. ಮ್ಯಾಕ್ ಕುಲ್ಲಾಹ್ ಹಾಗೂ ಜೇಮ್ಸ್ ಇ. ಟಿಲ್ ಈ ಕೋಶಗಳನ್ನು ಸಂಶೋಧಿಸಿದಾಗ, ಮಹತ್ವವರಿಯದ ನಾಗರಿಕ ಸಮಾಜ ಅಷ್ಟಾಗಿ ಬೆಲೆ ಕೊಟ್ಟಿರಲಿಲ್ಲವಂತೆ. ಆದರೆ ದಿನಕಳೆದಂತೆ ಈ ಕ್ಷೇತ್ರದಲ್ಲಿ ನೂರಾರು ಸಂಶೋಧನೆಗಳಾಗಿ ಅಂಗಾಂಗ ರಚನೆಯಲ್ಲಿ ಇವುಗಳ ಮಹತ್ವ ಇರುವುದು ತಿಳಿದ ಮೇಲೆ ಕೊಂಚ ಗಮನ ಹರಿಸಲು ಜನರು ಪ್ರಾರಂಭಿಸಿದ್ದಾರೆ.

ಏನಿದು ಸ್ಟೆಮ್ ಸೆಲ್?: ಸ್ಟೆಮ್ ಸೆಲ್‌ನ ಬಗ್ಗೆ ವಿವರಿಸಬೇಕಾದರೆ, ಇಡೀ ಜನನ ಪ್ರಕ್ರಿಯೆಯ ಬಗ್ಗೆಯೇ ಹೇಳಬೇಕಾಗುತ್ತದೆ. ಗಂಡು- ಹೆಣ್ಣಿನ ಮಿಲನವಾಗಿ, ವೀರ್ಯ ಹಾಗೂ ಹಾಗೂ ಅಂಡಾಣುಗಳು ಬೆರೆತು ಸೃಷ್ಟಿಯಾಗುವ ಕೋಶಗಳು ದ್ವಿಗುಣಗೊಳ್ಳುತ್ತಾ, ಮಾಂಸದ ಮುದ್ದೆಯಾಗಿ, ನಂತರ ಭ್ರೂಣವಾಗಿ ಮಗುವಾಗಿ ಜನ್ಮ ಪಡೆಯುತ್ತದೆ. ಆ ಮಾಂಸದ ಮುದ್ದೆ (ಬ್ಲಾಸ್ಟೋಸೈಟ್) ಯಲ್ಲಿ ಕಂಡು ಬರುವ ಕೋಶಗಳಲ್ಲಿ ಸ್ಟೆಮ್ ಸೆಲ್‌ಗಳು ಸಿಗುತ್ತವೆ. ಭ್ರೂಣದ ಈ ಕೋಶಗಳೇ ಮುಂದೆ ಮಗುವಿನ ದೇಹದಲ್ಲಿ ಎಲ್ಲ ಅಂಗಾಗಗಳನ್ನೂ ರಚಿಸುತ್ತಾ, ಪರಿಪೂರ್ಣವಾಗಿ ಮಗು ರೂಪಗೊಂಡಾಗ ಹೊರ ಜಗತ್ತಿಗೆ ಪಾದ ಬೆಳೆಸುತ್ತದೆ. ಹಾಗಾಗಿ ಈ ಮೂಲ ಜೀವ ಧಾತುವನ್ನೇ ವಿಜ್ಞಾನಿಗಳು ಎಂಬ್ರಿಯಾನಿಕ್ ಸ್ಟೆಮ್ ಸೆಲ್‌ಗಳೆಂದು ನಾಮಕರಣ ಮಾಡಿದ್ದಾರೆ. ಈ ಜೀವಕೋಶಗಳು ಹೆರಿಗೆಯ ಸಂದರ್ಭದಲ್ಲಿ ಮಗು ಆಚೆ ಬಂದಾಗ, ಬೆಸೆದುಕೊಂಡಿರುವ ಹೊಕ್ಕಳ ಬಳ್ಳಿಯಲ್ಲಿ ಕಂಚ ಇನ್ನೂ ಉಳಿದಿರುತ್ತವೆ. ಅವನ್ನು ಸಂಗ್ರಹಿಸಿಕೊಂಡು ವೈದ್ಯಕೀಯ ಲೋಕಕ್ಕೆ ಬಳಸಿಕೊಳ್ಳುವುದು ಮುಂದಿನ ಸವಾಲು.

ಇವಲ್ಲದೆ ಹಿರಿಯ ಸ್ಟೆಮ್ ಸೆಲ್‌ಗಳೆಂದೂ ಒಂದು ವಿಧವಿದೆ. ಅದು ಯಾವುದ ವಯೋಮಾನದ ವ್ಯಕ್ತಿಯ ದೇಹದ ಜೀವಕೋಶದಲ್ಲಿ ಕಂಡುಬರುವಂಥದ್ದು. ದೇಹದ ಘಾಸಿಗೊಳ್ಳುವ ಜೀವಕೋಶಗಳನ್ನು ದುರಸ್ತಿ ಮಾಡುವುದು ಇವುಗಳ ಕೆಲಸ.

ಈಗಿನ ಸಂಶೋಧನೆಯೇನೆಂದರೆ, ಎಂಬ್ರಿಯಾನಿಕ್ ಸ್ಟೆಮ್ ಸೆಲ್ ಗಳನ್ನು ಹೊಕ್ಕಳ ಬಳ್ಳಿಯಿಂದ ಸಂಗ್ರಹಿಸಿ, ಅವುಗಳಿಂದ ನಮಗೆ ಬೇಕಾದ ಅಂಗಗಳನ್ನು ಪುನರ್ ಸೃಷ್ಟಿ ಮಾಡಿಕೊಳ್ಳುವುದು. ಶಸ್ತ್ರ ಚಿಕಿತ್ಸೆ ಮೂಲಕ ಘಾಸಿಯಾದ ಅಂಗಗಳ ಜೀವಕೋಶದ ಮಾದರಿ ಸಂಗ್ರಹಿಸಿ, ಅದರಂತೆ ಕೋಶಗಳನ್ನು ಸ್ಟೆಮ್ ಸೆಲ್ ಮೂಲಕ ಉತ್ಪಾದಿಸಿ, ಅವನ್ನು ಮತ್ತೆ ಆ ಅಂಗಕ್ಕೆ ಸೇರಿಸಿ ಅಂಗವನ್ನು ವಾಸಿಯಾಗುವಂತೆ ಮಾಡಿಕೊಳ್ಳಬಹುದು.

ಸ್ಟೆಮ್ ಸೆಲ್ ವಿಧಗಳು: ೧. ಟೋಟಿಪೊಟೆಂಟ್- (ದ್ವಿವಿಭಜಕ ಶಕ್ತಿಯುಳ್ಳ) ವೀರ್ಯ, ಅಂಡಾಣು ಮಿಲನದಿಂದ ಉತ್ಪತ್ತಿಯಾಗುವ ಕೋಶ. ೨. ಪ್ಲೂರಿಪೊಟೆಂಟ್- (ಬಹುವಿಭಜಕ ಶಕ್ತಿಯುಳ್ಳ) ಟೋಟಿಪೊಟೆಂಟ್ ಸೆಲ್‌ನ ಮುಂದುವರೆದ ಭಾಗ, ಗುರುತು ಒಳಗೊಂಡದ್ದು. ೩. ಮಲ್ಟಿಪೊಟೆಂಟ್- ಯಾವುದೇ ಕೋಶವಾಗಬಲ್ಲ ಶಕ್ತಿಯುಳ್ಳ ಕೋಶ. ಯೂನಿಪೊಟೆಂಟ್ (ಏಕಮುಖ ಕೋಶ)- ಕೇವಲ ಸ್ವಜಾತಿಯ, ಪ್ರತ್ಯೇಕ ಅಂಗದ ಜೀವಕೋಶವಾಗಿ ಪರಿವರ್ತಿತ ಶಕ್ತಿಯುಳ್ಳ ಕೋಶ.

ಸೋಮವಾರ, ನವೆಂಬರ್ 17, 2008

ಇದು ಬ್ರಹ್ಮಾಂಡದ ಜನ್ಮ ರಹಸ್ಯ!


ನದಿ ಮೂಲ, ಋಷಿ ಮೂಲ, ಸ್ತ್ರೀ ಮೂಲ, ಸುದ್ದಿ ಮೂಲಗಳನ್ನು ಹುಡುಕಬಾರದು ಎಂಬ ಮಾತಿದೆ. ಏಕೆಂದರೆ ಹುಡುಕಿದರೂ ಅವು ಸುಲಭವಾಗಿ ಸಿಗಲಾರವು. ಆದರೆ ವಿಜ್ಞಾನ ಈ ಮಾತನ್ನು ಪಾಲಿಸುವುದಿಲ್ಲ. ಕಾರಣ, ಬ್ರಹ್ಮಾಂಡದ ಜನ್ಮರಹಸ್ಯವನ್ನು ಭೇದಿಸುವ ಮಹತ್ತರ ಸಂಶೋಧನೆಯೊಂದು ನಡೆದಿದೆ.


ಇದನ್ನು ನಂಬಲು ಸ್ವಲ್ಪ ಕಷ್ಟವಾಗಬಹುದು. ಏಕೆಂದರೆ ಸುಮಾರು ೧೩.೭ ಬಿಲಿಯನ್ ವರ್ಷಗಳಷ್ಟು ಹಿಂದಿನ ಒಂದು ಬೆಳಕಿನ ಕಿರಣ ವಿಶ್ವದಲ್ಲಿ ಸಂಚರಿಸುತ್ತಾ, ವಿಲ್ಕಿನ್‌ಸನ್ ಮೈಕ್ರೋವೇವ್ ವೀಕ್ಷಕ ಉಪಗ್ರಹದ ಗ್ರಾಹಕಗಳಿಗೆ ಬಂದು ತಲುಪಿದೆ! ನಾಸಾದ ಗಾಡ್ಡಾರ್ಡ್ ಅಂತರಿಕ್ಷ ಕೇಂದ್ರವೂ ಸೇರಿದಂತೆ, ಅಮೆರಿಕಾದ ಸುಮಾರು ೯ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಈ ಉಪಗ್ರಹ ಯೋಜನೆಯಲ್ಲಿ ಪಾಲ್ಗೊಂಡಿದ್ದಾರೆ. ಸುಮಾರು ಮೂರು ವರ್ಷಗಳಷ್ಟು ಸತತ ಅಧ್ಯಯನ ನಡೆಸಿದ ಈ ಉಪಗ್ರಹ, ಬ್ರಹ್ಮಾಂಡದ ಉಗಮದ ಬಗ್ಗೆ ಮಹತ್ತರವಾದ ಸುಳಿವುಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.


ನಾವೆಲ್ಲಾ ಶಾಲಾ ಕಾಲೇಜುಗಳಲ್ಲಿ ವಿಶ್ವದ ಉಗಮದ ಬಗ್ಗೆ ಹಲವು ಸಿದ್ಧಾಂತಗಳನ್ನು ಓದಿದ್ದೇವೆ. ಅದರಲ್ಲಿ ಪ್ರಮುಖವಾದದ್ದು ಬಿಗ್ ಬ್ಯಾಂಗ್ ಸಿದ್ಧಾಂತ (ಮಹಾಸ್ಪೋಟ). ಈ ಸಿದ್ಧಾಂತದ ಪ್ರಕಾರ ಈಗ ನಾವು ಕಾಣುತ್ತಿರುವ ಅನಂತ ವಿಸ್ತಾರದ ವಿಶ್ವ, ಹಿಂದೆ ಕೆಲವೇ ಕೆಲವು ಮಿಲಿಮೀಟರ್‌ಗಳಷ್ಟು ವಿಸ್ತೀರ್ಣದಲ್ಲಿ ಒಟ್ಟುಗೂಡಿತ್ತು. ಬಹು ಶಾಖದಿಂದ ಕೂಡಿದ ಅನಿಲಗಳ ಆ ಗುಂಪು, ಯಾವುದೋ ಹಂತದಲ್ಲಿ ಶಾಖ ಹಾಗೂ ಒತ್ತಡದ ಮಿತಿ ಮೀರಿದ್ದರಿಂದ ಸ್ಪೋಟಗೊಂಡು ವಿಸ್ತರಿಸುತ್ತಾ ಹೋಯಿತು. ಇಂದು ನಾವು ಕಾಣುತ್ತಿರುವ ನಕ್ಷತ್ರಪುಂಜಗಳು, ಗ್ರಹಗಳು, ಧೂಮಕೇತುಗಳು, ಕ್ಷುದ್ರಗ್ರಹಗಳು, ಈ ಮಹಾಸ್ಫೋಟದ ಮಕ್ಕಳು. ಇದು ೧೩.೭ ಬಿಲಿಯನ್ ವರ್ಷಗಳಲ್ಲಿ ನಡೆದಿರುವ ಕ್ರಿಯೆ! ಆದರೆ ಇದನ್ನು ನಿರೂಪಿಸಿ ತೋರಿಸುವುದು ಕಷ್ಟದ ಮಾತು. ಅದಕ್ಕೆ ನಾವು ಆ ಮಹಾಸ್ಫೋಟವಾದ ಕ್ಷಣದ ಸಮಯಕ್ಕೆ ಹೋಗಿ ನಿಲ್ಲಬೇಕಾಗುತ್ತದೆ.


ಈಗ ನಮಗೆ ದೊರೆತಿರುವ ಈ ಪ್ರಾಚೀನಾತಿ ಪ್ರಾಚೀನ ಬೆಳಕಿನ ಕಿರಣ, ಮಹಾಸ್ಫೋಟವಾದ ಕ್ಷಣದಲ್ಲಿ ಬಿಡುಗಡೆಯಾಗಿರುವಂಥದ್ದು. ಈ ಕಿರಣ ತನ್ನ ಒಡಲಿನಲ್ಲಿ ಆ ಸಮಯದ ಹಲವು ವಿಷಯಗಳನ್ನು ಇಟ್ಟುಕೊಂಡಿರುವ ಸಾಕ್ಷಿಯಾಗಿದೆ. ವಿಜ್ಞಾನಿಗಳು ಹೇಳುವ ಪ್ರಕಾರ, ಆ ಕಿರಣ ಬಹಳ ದುರ್ಬಲವಾಗಿದ್ದರೂ, ಮಹಾಸ್ಫೋಟಗೊಂಡ ಒಂದು ಸೆಕೆಂಡಿನ ಮೊದಲನೇ ಟ್ರಿಲಿಯನ್ (೧ ರ ಮುಂದೆ ಹನ್ನೆರಡು ಸೊನ್ನೆ) ಭಾಗದಲ್ಲಿ ನಡೆದಿರುವ ಘಟನೆಗಳು ನಮಗೆ ಅದರಿಂದ ಸಿಗುತ್ತವೆ!
ಈ ಸಂಶೋಧನೆ, ವಿಶ್ವದ ವಯಸ್ಸು, ತಿರುಳು, ಬೆಳವಣಿಗೆ, ಆಯಸ್ಸುಗಳ ಬಗ್ಗೆ ಮಹತ್ತರವಾದ, ನಿಖರ ಮಾಹಿತಿಗಳನ್ನು ಕೊಟ್ಟಿದೆ. ಈಗ ದೊರೆತಿರುವ ಪ್ರಾಚೀನ ಬೆಳಕಿನ ಕಿರಣವನ್ನು ಆಧಾರವಾಗಿಟ್ಟುಕೊಂಡು, ಶಿಶು ವಿಶ್ವದ ವಿವರಣಾತ್ಮಕ ಚಿತ್ರವನ್ನು ವಿಜ್ಞಾನಿಗಳು ಸೃಷ್ಠಿಸಿದ್ದಾರೆ. ಮಹಾಸ್ಪೋಟದ ನಂತರ ಹುಟ್ಟಿದ ಶಿಶು ನಕ್ಷತ್ರಗಳ ಕಾಲದಿಂದ (೪೦೦ ಮಿಲಿಯನ್ ವರ್ಷ) ಹಿಡಿದು, ಪ್ರಸ್ತುತ ನಮ್ಮ ವಿಶ್ವದ ರಚನೆಯ ಚಿತ್ರಣ ಅದರಲ್ಲಿದೆ.


ಈ ಸಂಶೋಧನೆಯಿಂದ ತಿಳಿದುಬಂದಿರುವ ಮಹತ್ತರದ ವಿಷಯವೆಂದರೆ, ನಾವು ಇದುವರೆಗೆ ವಿಶ್ವದ ಕಡೆಗೆ ದೃಷ್ಟಿ ಹಾಯಿಸಿರುವುದು ಕೇವಲ ಶೇ.೪ ರಷ್ಟು ಮಾತ್ರ ಎಂದು! ಅಂದರೆ ಉಳಿದ ಶೇ.೯೬ ಪ್ರದೇಶ ನಿಗೂಢವಾಗಿಯೇ ಉಳಿದಿದೆ. ಆದರೆ ಈಗ ಆ ನಿಗೂಢ ವಿಶ್ವಕ್ಕೆ ದಾರಿ ದೊರೆತಿದೆ. ವಿಜ್ಞಾನಿಗಳ ಪ್ರಕಾರ ಅದು ವಿಶ್ವದ ಶಕ್ತಿಯ ಮೂಲ. ಅದರ ಬಳಕೆ ನಮಗೆ ಬೇಕು ಎನ್ನುವುದು ಇದರ ಅರ್ಥವಲ್ಲ. ವಿಶ್ವ ಉಸಿರಾಡುತ್ತಿರುವುದೇ ಅದರ ಶಕ್ತಿಯಿಂದ. ಮನುಷ್ಯನ ತಿಳಿಯುವ ಹಂಬಲ, ಸಾಹಸಗಳಿಗೆ ಇದು ಮತ್ತೊಂದು ಮೆಟ್ಟಿಲಾಗಲಿದೆ. ಆ ಶೇ.೯೬ ಪ್ರದೇಶದಲ್ಲಿ ನಮಗೆ ಈಗಿರುವ ವಿಶ್ವದ ಕಲ್ಪನೆಯನ್ನೂ ಮೀರಿ, ವಿಭಿನ್ನವಾದಂತಹ ಮತ್ತೊಂದು ಜಗತ್ತೇ ಕಾಣಬಹುದು. ಇವತ್ತಿಗೂ ರಹಸ್ಯವೇ ಆಗಿ ಉಳಿದಿರುವ ಅನ್ಯಗ್ರಹ ಜೀವಿಗಳ ಆವಾಸ ಸ್ಥಳ ಅದಾಗಿರಬಹುದು. ಫ್ಲೈಯಿಂಗ್ ಸಾಸರ್‌ಗಳು ಅಲ್ಲಿಂದಲೇ ಹಾರಿಬರುತ್ತಿರಬಹುದು.


ವಿಶ್ವದ ಆಯಸ್ಸಿನ ಮುಂದೆ ಭೂಮಿ, ನಕ್ಷತ್ರಗಳ ಆಯಸ್ಸು ಹುಲ್ಲುಕಡ್ಡಿಯಿದ್ದಂತೆ. ವಿಜ್ಞಾನಿಗಳ ಪ್ರಕಾರ ವಿಶ್ವ ಈಗ ಸಾವಿನ ಹತ್ತಿರ ಬಂದಿದೆ. ನಮಗೆ ಗೊತ್ತಿಲ್ಲದ ಆ ಶೇ.೯೬ ಪ್ರದೇಶದ ಚಟುವಟಿಕೆಗಳು ಮತ್ತೊಂದು ಮಹಾಸ್ಫೋಟಕ್ಕೆ ಕಾರಣವಾಗುವ ಸೂಚನೆಗಳನ್ನು ನೀಡಿವೆ. ಆಗ ಮತ್ತೊಂದು ಹೊಸ ವಿಶ್ವದ ಉಗಮವಾಗಬಹುದು. ಹುಟ್ಟಿದೆಲ್ಲಾ ಸಾಯಲೇಬೇಕು ಎನ್ನುವುದು ಇದಕ್ಕಾಗಿಯೇ. ಹಾಗೆಂದು ನಾವು ಹೆದರಬೇಕಿಲ್ಲ. ಅದಕ್ಕೆ ಮತ್ತಷ್ಟು ಬಿಲಿಯನ್ ವರ್ಷಗಳು ಬೇಕಾದರೂ ಆಗಬಹದು.
ಮನುಷ್ಯನ ಬುದ್ಧಿ ಶಕ್ತಿಗೆ, ಸಾಹಸ ಪ್ರವೃತ್ತಿಗೆ ಈ ಸಂಶೋಧನೆ ಒಂದು ದೊಡ್ಡ ಸವಾಲು. ಈ ಸಂಶೋಧನೆಯನ್ನು ಇಟ್ಟುಕೊಂಡು ನಾವು ಮತ್ತಷ್ಟು ವಿಷಯಗಳನ್ನು ಬೆಳಕಿಗೆ ತರಬೇಕಾಗಿದೆ. ನಮ್ಮ ಮುಂದಿನ ಪೀಳಿಗೆಗೆ ಈ ಸಂಶೋಧನೆ ಊರುಗೋಲಾಗಲಿದೆ.

ಸೃಷ್ಟಿ ಹೇಗಾಯಿತು ಗೊತ್ತೇನು?


ಸ್ವಿಟ್ಸರ್‌ಲ್ಯಾಡಿನ ಸಿಇಆರ್‌ಎನ್ (ಕೌನ್ಸಿಲ್ ಯೂರೋಪಿಯನ್ ಪೌಲ್ ಲಾ ರಿಸರ್ಚ್ ನ್ಯೂಕ್ಲಿಯರೆ) ಕೆಲವು ದಿನಗಳ ಹಿಂದೆ ವಿಶ್ವ ಸೃಷ್ಟಿಯಾದದ್ದು ಹೇಗೆ ಎಂಬುದನ್ನು ಪ್ರಾಯೋಗಿಕವಾಗಿ ತೋರಿಸಲು ಹೋಗಿ ಸುದ್ದಿಯಾಗಿತ್ತು. ಆ ಪ್ರಯೋಗ ಇನ್ನೂ ನಿಂತಿಲ್ಲ. ಈ ಎಲ್ಲ ಪ್ರಯೋಗಕ್ಕೂ ಮೂಲ ಧಾತು ಏನು ಗೊತ್ತೇ , ಪ್ರತಿ ವಸ್ತು. ಈಗದರ ಬಗ್ಗೆ ತಿಳಿಯೋಣ ಬನ್ನಿ...

ದು ನಾಳೆಯ ಶಕ್ತಿಯ ಮೂಲ. ಇದಕ್ಕೆ ಅಣುಶಕ್ತಿಗಿಂತಾ ಸಾವಿರ ಪಟ್ಟು ಹೆಚ್ಚು ಶಕ್ತಿ. ಶೇಕಡಾ ನೂರಕ್ಕೆ ನೂರರಷ್ಟು ಕಾರ್ಯಕ್ಷಮತೆ. ತ್ಯಾಜ್ಯವಿಲ್ಲ. ಅಣುವಿಕಿರಣವಿಲ್ಲ. ಮಾಲಿನ್ಯವಂತೂ ಇಲ್ಲವೇ ಇಲ್ಲ. ಕೆಲವೇ ಗ್ರಾಂಗಳಿಂದ ಬೆಂಗಳೂರಿನಂತಹ ನಗರಕ್ಕೆ ಒಂದು ವಾರ ವಿದ್ಯುತ್ ಪೂರೈಸಬಹುದು.


ಇದು ಪ್ರತಿವಸ್ತುವಿನ ವಿಚಾರ. ಸ್ವಿಟ್ಸರ್ ಲ್ಯಾಂಡಿನಲ್ಲಿರುವ ಸಿ.ಇ.ಆರ್.ಎನ್. (ಕೌನ್ಸಿಲ್ ಯೂರೋಪಿಯನ್ ಪೌರ್ ಲಾ ರಿಸರ್ಚ್ ನ್ಯೂಕ್ಲಿಯರೇ) ವಿeನಿಗಳು ವಿಶ್ವದಲ್ಲೇ ಮೊದಲ ಬಾರಿಗೆ ಪ್ರಪ್ರಥಮ ಪ್ರತಿವಸ್ತು ಕಣಗಳನ್ನು ತಯಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು ೭೦ ವರ್ಷಗಳ ಸಂಶೋಧನೆಯ ಫಲವಾಗಿ ಇಂದು ಮಾನವ ತನ್ನ ಭವಿಷ್ಯತ್ತಿನ ಶಕ್ತಿಯನ್ನು ಕಂಡುಕೊಂಡಿದ್ದಾನೆ.

ಹಾಗಿದ್ದರೆ, ಏನಿದು ಪ್ರತಿವಸ್ತು?: ಈ ಪ್ರತಿವಸ್ತುವಿನ ವಿಚಾರ ಇಡೀ ವಿಶ್ವದ ಅಳತೆಯಷ್ಟು ದೊಡ್ಡದಾದುದು. ಮಾನವನಿಗೆ ಭೂಮಿಯಾಚೆಗಿನ ಜೀವಿಗಳ ಬಗ್ಗೆ ಸದಾ ಆಸಕ್ತಿ. ಅದಕ್ಕಾಗಿ ಮನುಷ್ಯ ಮಾಡಿರುವ ಸಾಹಸಗಳು ಅಷ್ಟಿಷ್ಟಲ್ಲ. ಚಂದ್ರನ ಮೇಲೆ ಮೊದಲು ಕಾಲಿಡುವುದರಿಂದ ಹಿಡಿದು, ಮೊನ್ನೆ ಮೊನ್ನೆ ಟೆಂಪಲ್-೧ ಧೂಮಕೇತುವಿನ ಮೇಲೆ ಕಮರಿ ಸೃಷ್ಠಿಸುವ ಡೀಪ್ ಇಂಪ್ಯಾಕ್ಟ್ ತನಕವೂ ಅನ್ಯ ಜೀವಿಗಳಿಗಾಗಿ ಹುಡುಕಾಟ ನಡೆದೇ ಇದೆ. ಅನ್ಯ ಜೀವಿಗಳನ್ನು ಕುರಿತು ಇರುವ ಸಿದ್ಧಾಂತಗಳು ಕಡಿಮೆಯಲ್ಲ. ಅದರಲ್ಲಿ ಪ್ರಮುಖವಾದುದೇ ಪ್ರತಿವಸ್ತು ಸಿದ್ಧಾಂತ.


೧೯೨೮ರಲ್ಲಿ ಪಾಲ್ ಡ್ಯುರಾಕ್ ಎನ್ನುವ ವಿಜ್ಞಾನಿ ಪ್ರಪ್ರಥಮವಾಗಿ ಪ್ರತಿವಸ್ತು ಸಿದ್ಧಾಂತವನ್ನು ಮಂಡಿಸಿದನು. ಅವನ ಪ್ರಕಾರ ಭೂಮಿಯ ಮೇಲಿರುವ ಸಕಲವೂ ವಸ್ತುಗಳಿಂದ ರಚಿತವಾಗಿದ್ದರೆ, ಅದಕ್ಕೆ ವಿರುದ್ಧವಾದ ಪ್ರತಿವಸ್ತುವೊಂದು ಇರಲೇಬೇಕು. ನೋಡಲು ಸಾಕ್ಷಾತ್ ವಸ್ತುವಿನ ಪ್ರತಿಫಲನದಂತಿರುವ ಪ್ರತಿವಸ್ತು, ಅಣುರಚನೆಯಲ್ಲಿ ಮಾತ್ರ ವಸ್ತುವಿಗೆ ತದ್ವರುದ್ಧ. ಅಂದರೆ ವಿಶ್ವದ ಮತ್ಯಾವುದೋ ಮೂಲೆಯಲ್ಲಿ ಭೂಮಿಯ ಪ್ರತಿಫಲನದಂತಿರುವ ಮತ್ತೊಂದು ಗ್ರಹ ಇರಲೇಬೇಕು, ಹಾಗೆಯೇ ಜೀವಿಗಳೂ ಇರಬೇಕು. ಆದರೆ ಈ ಸಂಶೋಧನೆಯಲ್ಲಿ ತಿಳಿದದ್ದು ಈ ವಸ್ತು-ಪ್ರತಿವಸ್ತುಗಳು ಅಣುರಚನೆಯಲ್ಲಿ ಸಂಪೂರ್ಣ ತದ್ವಿರುದ್ಧವಾಗಿರುವುದರಿಂದ ಅವು ಒಂದನ್ನೊಂದು ಎಂದೂ ಸಂಧಿಸಲಾರವು! ಸಂಧಿಸಿದರೆ ಅಪಾರ ಪ್ರಮಾಣದ ಶಕ್ತಿ ಉತ್ಪತ್ತಿಯಾಗುತ್ತದೆ ಎಂದು!

ಆದರೆ ಈ ಪ್ರತಿವಸ್ತುವಿಗೆ ಏಕೆ ಅಷ್ಟು ಶಕ್ತಿ?: ಇದು ಬಹಳ ವಿಸ್ಮಯದ ಸಂಗತಿ. ವಸ್ತುವಿನ ಅಣುರಚನೆಯಲ್ಲಿ ಅಣುಕೇಂದ್ರದಲ್ಲಿನ ನ್ಯೂಕ್ಲಿಯಸ್ ಸುತ್ತಲೂ ಸುತ್ತುತ್ತಿರುವ ಎಲೆಕ್ಟ್ರಾನ್ ದಿಕ್ಕಿಗೆ ಸಂಪೂರ್ಣ ವಿರುದ್ಧ ದಿಕ್ಕಿನಲ್ಲಿ ಪ್ರತಿವಸ್ತುವಿನ ಎಲೆಕ್ಟ್ರಾನ್ ಸುತ್ತುತ್ತಿರುತ್ತದೆ. ಈ ತದ್ವಿರುದ್ಧ ರಚನೆಯ ಅಣುಗಳ ನಡುವೆ ಸಂಬಂಧ ಏರ್ಪಟ್ಟರೆ ಘರ್ಷಣೆಯಾಗಿ ಊಹೆಗೂ ನಿಲುಕದ ಶಕ್ತಿ ಬಿಡುಗಡೆಯಾಗುತ್ತದೆ. ಮನುಷ್ಯ ಕಂಡುಹಿಡಿದಿರುವ ಯಾವ ಸ್ಪೋಟಕಕ್ಕೂ ಇದಕ್ಕೆ ಸರಿಸಮನಾದ ಶಕ್ತಿಯಿಲ್ಲ. ಒಂದು ಗ್ರಾಂ ಪ್ರತಿವಸ್ತು, ಹಿರೋಷಿಮಾ ನಗರದ ಮೇಲೆ ಹಾಕಿದ ಅಣು ಬಾಂಬ್ (೨೦ ಕಿಲೋಟನ್) ನ ವಿಕಿರಣ ಶಕ್ತಿಗೆ ಸಮವಾಗುತ್ತದೆ!

ಆದರೆ ಪ್ರತಿವಸ್ತುವನ್ನು ತಯಾರಿಸುವುದು ಹೇಗೆ?: ನಾವು ಯಾವುದೇ ವಸ್ತುವಿನ ಪ್ರತಿವಸ್ತುವನ್ನು ತಯರಿಸಬಹುದು. ಉದಾಹರಣೆಗೆ ಜಲಜನಕದ ಅಣುವಿನಲ್ಲಿನ ಪ್ರೋಟಾನ್‌ಗಳನ್ನು ಟಂಗ್ಸಟನ್ ಲೋಹದ ತುಂಡೊಂದಕ್ಕೆ ಡಿಕ್ಕಿ ಹೊಡೆಸಿದಾಗ, ಲೆಕ್ಕವಿಲ್ಲದಷ್ಟು ಕಣಗಳು ಉತ್ಪತ್ತಿಯಾಗುತ್ತವೆ. ಆದರೆ ಅವುಗಳಲ್ಲಿ ಕೆಲವೇ ಕೆಲವು ಮಾತ್ರ ಪ್ರತಿ-ಪ್ರೋಟಾನ್‌ಗಳಾಗಿರುತ್ತವೆ. ಆ ಪ್ರತಿ-ಪ್ರೋಟಾನ್‌ಗಳನ್ನು ಸಂಗ್ರಹಿಸಿದರೆ ಅವೇ ಶಕ್ತಿಯ ಮೂಲಗಳಾಗುತ್ತವೆ. ಅದೇ ಪ್ರತಿ-ಜಲಜನಕ. ಆದರೆ ಸದ್ಯಕ್ಕೆ ಉತ್ಪಾದನಾ ವೆಚ್ಛ, ಅದರ ಪ್ರಯೋಜನಕ್ಕಿಂತಲೂ ಹೆಚ್ಚಿದೆ. ಮಿಲ್ಕೀವೇ ನಕ್ಷತ್ರ ಮಂಡಳದ ಮೇಲಿರುವ ಪ್ರತಿವಸ್ತು ಮೋಡದಿಂದ ಪ್ರತಿವಸ್ತು ತರುವಂತಾದರೆ ಇದು ಪ್ರಯೋಜನಕಾರಿ.


ಆದರೆ ಪ್ರತಿವಸ್ತುಗಳು ತುಂಬಾ ಸೂಕ್ಷ್ಮ ಸ್ವಭಾವದವಾಗಿವೆ. ಪ್ರತಿವಸ್ತುಗಳು ಯಾವುದೇ ಸಂದರ್ಭದಲ್ಲಿಯೂ ವಸ್ತುವಿನ ಜೊತೆ ಕೂಡಬಾರದು. ಗಾಳಿಯೊಂದಿಗೂ ಸಂಪರ್ಕಕ್ಕೆ ಬಂದು ಸಿಡಿಯುವ ಇವನ್ನು ನಿರ್ವಾತದ ಶೀಶೆಗಳಲ್ಲಿಯೇ (ಎಲೆಕ್ಟ್ರೋ ಮ್ಯಾಗ್ನೆಟಿಕ್ ಬಾಟೆಲ್) ಇಡಬೇಕು. ಕೆಲವೇ ಗ್ರಾಂ ಪ್ರತಿವಸ್ತುಗಳನ್ನು ನಿಯಂತ್ರಿತ ಸ್ಥಿತಿಯಲ್ಲಿ ಕೂಡಿಸಿ, ಅತಿ ದೊಡ್ಡ ನಗರಗಳಿಗೆ ವಾರಗಟ್ಟಲೇ ವಿದ್ಯುತ್ ಪೂರೈಸಬಹುದು. ವಿಕಿರಣ ಪೂರಿತ ಶಕ್ತಿಯ ಮೂಲಗಳಿಗೆ ಇನ್ನು ವಿದಾಯ ಹಾಡಬಹುದು. ಇದು ಕೊನೆಯೇ ಇಲ್ಲದ ಶಕ್ತಿಯ ಮೂಲ. ಇದು ಭೂಮಿಯನ್ನು ಉಳಿಸಬಹುದು. ಆದರೆ ನಾಶಮಾಡಲೂಬಹುದು.


ಈ ವಸ್ತು-ಪ್ರತಿವಸ್ತು ಕೂಡಿಸುವಿಕೆಯಲ್ಲಿನ ನಿಯಂತ್ರಣ ವ್ಯವಸ್ಥೆಯಲ್ಲಿ ಎಳ್ಳಷ್ಟು ಹೆಚ್ಚು ಕಡಿಮೆಯಾದರೂ ಅನಾಹುತ ಕಟ್ಟಿಟ್ಟ ಬುತ್ತಿ. ಸ್ವಲ್ಪವೇ ಅಜಾಗರೂಕತೆ ನಗರ ನಗರಗಳನ್ನೇ ಸುಟ್ಟುಬಿಡಬಹುದು. ಪ್ರತಿವಸ್ತುಗಳು ದುಷ್ಟರ ಕೈಗೆ ಸಿಕ್ಕಿದರಂತೂ ಭೂಮಿಯ ಆಯಸ್ಸು ಮುಗಿದಂತೆಯೇ. ಅದಕ್ಕಾಗಿಯೇ ಸಿ.ಇ.ಆರ್.ಎನ್. ತನ್ನ ಸಂಶೋಧನೆಯ ವಿವರಗಳನ್ನು ಬಹಿರಂಗಗೊಳಿಸಿಲ್ಲ.
ಭೂಮಿಯ ಮೇಲಿನ ಶಕ್ತಿಯ ಮೂಲಗಳು ಮುಗಿದೇ ಹೋದರೆ, ಶಕ್ತಿಗಾಗಿ ಪ್ರತಿವಸ್ತುವಿನ ಆಸರೆ ಅನಿವಾರ್ಯವಾದಾಗ ಮಾತ್ರ ಇದರ ಬಳಕೆ ಎಂದು ಸಿ.ಇ.ಆರ್.ಎನ್. ಹೇಳಿದೆ.

ಚಂದ್ರನ ಚೂರು!

ಇತ್ತೀಚೆಗಷ್ಟೇ ಭಾರತವು ಚಂದ್ರಯಾನವನ್ನು ಕೈಗೊಂಡು ವಿಶ್ವದ ಅಚ್ಚರಿಯ ಕಣ್ಣುಗಳಿಗೆ ಪಾತ್ರರಾದದ್ದು ಎಲ್ಲರಿಗು ತಿಳಿದೇ ಇದೆ. ಇಸ್ರೋ ಭವಿಷ್ಯದಲ್ಲಿ ಸೂರ್ಯಯಾನವನ್ನೂ ಮಾಡುತ್ತದಂತೆ! ಚಂದ್ರನ ಮೇಲೆ ಕೆಲವೇ ವರ್ಷಗಳಲ್ಲಿ ರೋಬಾಟ್‌ನ್ನೂ ಇಳಿಸುತ್ತದಂತೆ. ಈ ಅಂತೆ ಕಂತೆಗಳ ನಡುವೆಯೇ ಚಂದ್ರನಿಗೆ ಸಂಬಂಧಿಸಿದ ಈ ಮಾಹಿತಿಯನ್ನು ಒಮ್ಮೆ ನೋಡಿ. ಭಾರತ ಚಂದ್ರಯಾನ ಕೈಗೊಂಡಿದ್ದು ನಿಜಕ್ಕೂ ಸಾರ್ಥಕ ಅನ್ನಿಸದಿರದು.
ಮೆರಿಕಾದ ಹೂಸ್ಟನ್‌ನಲ್ಲಿರುವ ಬಾಹ್ಯಾಕಾಶ ವಿಜ್ಞಾನಿಗಳು ಈ ಪ್ರಯೋಗದಲ್ಲೇನಾದರೂ ಗೆದ್ದರೆ, ನಾವು ಇಂದಿನ ಎಲ್ಲಾ ಸಾಂಪ್ರದಾಯಿಕ ಹಾಗೂ ಮಾಲಿನ್ಯಕಾರಿ ವಿದ್ಯುತ್ ಮೂಲಗಳಿಗೂ ಶಾಶ್ವತವಾಗಿ ವಿದಾಯ ಹೇಳಬಹುದು. ನಾಸಾದ ವಿಜ್ಞಾನಿ ಡಾ. ಡೇವಿಡ್ ಕ್ರಿಸ್‌ವೆಲ್, ನಮ್ಮ ಭೂಮಿಗೆ ಸಾಕಾಗುವಷ್ಟು ವಿದ್ಯುತ್ತನ್ನು ಚಂದ್ರನ ಮೂಲಕ ಪಡೆಯಬಹುದೆಂದು ಪ್ರಯೋಗ ಮಾಡಹೊರಟಿದ್ದಾರೆ !

ಇಂದಿನ ಎಲ್ಲಾ ವಿದ್ಯುತ್ ಮೂಲಗಳಾದ ನೀರು, ಗಾಳಿ, ಕಲ್ಲಿದ್ದಲು ಮತ್ತು ಅಣುಶಕ್ತಿ, ಯಾವಾಗಲೂ ಒಂದಲ್ಲಾ ಒಂದು ತೊಂದರೆಯನ್ನು ಕೊಡುತ್ತಲೇ ಇರುತ್ತವೆ. ನೀರಿಲ್ಲದಿದ್ದರೆ ಬೆಳೆಯೂ ಇಲ್ಲ, ಮನೆಗೆ ದೀಪವೂ ಇಲ್ಲ! ಇನ್ನು ಗಾಳಿ. ಬೀಸಿದರೆ ಉಂಟು ಇಲ್ಲದಿದ್ದರೆ ಇಲ್ಲ. ಇನ್ನು ಕಲ್ಲಿದ್ದಲೋ, ಮುಗಿಯ ಬಂದು ವರ್ಷಗಳೇ ಆಗಿವೆ. ಅಣು ಸ್ಥಾವರಗಳಿಂದಂತೂ ಹೇಳಲಾಗದಂತಹ ಪ್ರಾಣ ಭಯ ಬೇರೆ! ಇವೆಲ್ಲರದ ಜೊತೆಗೆ, ಭರಿಸಲಾರದಷ್ಟು ಪರಿಸರ ಮಾಲಿನ್ಯವೂ ಆಗುತ್ತದೆ. ಈ ಎಲ್ಲಾ ಶತಮಾನದ ತೊಂದರೆಗೂ, ನಾಸಾ ಶಾಶ್ವತವಾದ ಪರಿಹಾರವನ್ನು ಕಂಡುಹಿಡಿಯ ಹೊರಟಿದೆ. ಅದೇ ಚಂದ್ರನಿಂದ ವಿದ್ಯುತ್ತನ್ನು ಪಡೆಯುವುದು.
ಇದು ಆಶ್ಚರ್ಯದ ಸಂಗತಿಯೇ. ನಂಬಲು ತುಸು ಕಷ್ಟವೇ. ಆದರೆ ವಿಜ್ಞಾನ ಪ್ರತಿಯೊಂದಕ್ಕೂ ಪುರಾವೆಗಳನ್ನು ನೀಡುತ್ತಾ, ನಮ್ಮನ್ನು ನಂಬುವಂತೆ ಮಾಡಿಬಿಡುತ್ತದೆ. ಸೌರ ಶಕ್ತಿಯ ಬಗ್ಗೆ ನಾವೆಲ್ಲಾ ಕೇಳಿಯೇ ಇದ್ದೇವೆ. ವಿಫುಲವಾಗಿ ದೊರಕುವ ಸೌರಶಕ್ತಿಯನ್ನು ಬಳಸಿಕೊಳ್ಳಲು ಮಾನವ ಹೇಗೇಗೋ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾನೆ. ಹೊಸ ಹೊಸ ಸಾಧನಗಳನ್ನು ಕಂಡುಹಿಡಿಯುತ್ತಲೇ ಇದ್ದಾನೆ. ಆದರೂ ವಿಶ್ವವನ್ನೇ ನಿಯಂತ್ರಿಸುವ ಈ ಸೌರಶಕ್ತಿಯನ್ನು ಗರಿಷ್ಠವಾಗಿ ಬಳಸಿಕೊಳ್ಳಲು ಸೋಲುತ್ತಲೇ ಇದ್ದಾನೆ.

ಇದಕ್ಕೆ ಕಾರಣಗಳು ಹಲವು. ಭೂಮಿಯ ಸುತ್ತಲೂ ಇರುವ ವಾತಾವರಣ ಹಾಗೂ ಹಲವು ರಕ್ಷಣಾ ಪದರಗಳು, ನಿಜವಾದ ಶಕ್ತಿಯುತವಾದ ಸೂರ್ಯನ ಕಿರಣಗಳನ್ನು ಸೋಸಿ, ಜೀವ ಪೋಷಣೆಗೆ ಮಾರಕವಾಗದಂತಹ ಬೆಳಕನ್ನು ಕೊಡುತ್ತವೆ. ಹೀಗಾದಾಗಲೂ ನಾವು ಭೂಮಿಯ ಹಲವು ಕಡೆಗಳಲ್ಲಿ ಪ್ರಬಲವಾದ ಸೂರ್ಯನ ಬೆಳಕನ್ನು ಪಡೆಯುತ್ತೇವಾದರೂ, ಅದು ಶಕ್ತಿ ಕಳೆದುಕೊಂಡ ಬೆಳಕು. ಜೊತೆಗೆ ಮೋಡ, ಮಳೆ ಇತ್ಯಾದಿಗಳಿಂದಾಗಿ ಆ ದುರ್ಬಲ ಬೆಳಕು ಮತ್ತೂ ಸೋಸಿ ಹೋಗುತ್ತದೆ. ಈ ತೊಂದರೆಗಳನ್ನು ಮನಗಂಡ ನಾಸಾ, ಚಂದ್ರನಲ್ಲಿ ಸೋಲಾರ್ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸುವಲ್ಲಿ ಗಂಭೀರವಾಗಿ ಯೋಚಿಸುತ್ತಿದೆ.

ಚಂದ್ರನ ಮೇಲೆ ಸೋಲಾರ್ ಸ್ಥಾವರಗಳನ್ನು ಸ್ಥಾಪಿಸಿದರೆ ಅನುಕೂಲಕಗಳು ಹೆಚ್ಚು. ಅಲ್ಲಿ ಯಾವುದೇ ರೀತಿಯ ವಾತಾವರಣ, ರಕ್ಷಣಾ ಪದರಗಳು ಇಲ್ಲವಾದ್ದರಿಂದ, ಸೂರ್ಯನ ನೇರವಾದ ಕಿರಣಗಳು ಚಂದ್ರನ ಮೇಲ್ಮೈಯನ್ನು ಮುಟ್ಟುತ್ತವೆ. ನಮಗೆ ಗೊತ್ತಿರುವಂತೆ, ಚಂದ್ರನ ಮೇಲ್ಮೈ ಉಷ್ಣಾಂಶ ೧೨೭ ಡಿಗ್ರಿ ಸೆಲ್ಸಿಯಸ್ಸ್‌ನಷ್ಟು ಇರುತ್ತದೆ. ಭೂಮಿಯ ಮೇಲ್ಮೈ ಉಷ್ಣಾಂಶ ಇದರ ಮುಂದೆ ಏನೇನೂ ಅಲ್ಲ. ಅಂದರೆ, ಅತಿ ಹೆಚ್ಚು ಶಕ್ತಿಯ ಸೌರ ಕಿರಣಗಳು ಇಲ್ಲಿ ಪ್ರಭಾವ ಬೀರುತ್ತವೆ. ಆದ್ದರಿಂದ ನಾಸಾ ಚಂದ್ರನ ಮೇಲ್ಮೈನ ಮೇಲೆ ಸೌರ ಫಲಕಗಳನ್ನು ಸ್ಥಾಪಿಸ ಹೊರಟಿದೆ.

ಕ್ರಿಸ್‌ವೆಲ್ ಹೇಳುವ ಹಾಗೆ, ೨೦೫೦ರ ಸುಮಾರಿಗೆ ಭೂಮಿಯ ಮೇಲೆ ೧೦ ಬಿಲಿಯನ್ ಜನ ವಾಸಿಸುತ್ತಿರುತ್ತಾರೆ. ಅವರೆಲ್ಲರಿಗೆ ವರ್ಷವೊಂದಕ್ಕೆ ೨೦ ಟೆಟ್ರಾವ್ಯಾಟ್‌ಗಳಷ್ಟು ವಿದ್ಯುತ್ ಬೇಕಾಗುತ್ತದೆ. ನಾಸಾದ ಅನ್ವೇಷಣೆಗಳ ಪ್ರಕಾರ, ಚಂದ್ರ ವರ್ಷವೊಂದಕ್ಕೆ ಕನಿಷ್ಟ ೧೩,೦೦೦ ಟೆಟ್ರಾವ್ಯಾಟ್ ಶಕ್ತಿಯನ್ನು ಪಡೆಯುತ್ತದೆ. ಅಂದರೆ ನಾವು ಚಂದ್ರನ ಮುಖಾಂತರ ಕೇವಲ ೧ ಭಾಗದಷ್ಟು ವಿದ್ಯುತ್ತನ್ನು ಪಡೆದರೂ, ಇಂದಿನ ಎಲ್ಲಾ ಸಾಂಪ್ರದಾಯಿಕ ವಿದ್ಯುತ್ ಸ್ಥಾವರಗಳ ತೊಂದರೆಗಳನ್ನೂ ಸುಲಭವಾಗಿ ದಾಟಬಹುದು. ನಾಸಾ ಬಳಿ ಈಗಾಗಲೇ ಚಂದ್ರನ ಮೇಲ್ಮೈ, ರಚನೆ ಮತ್ತಿತರ ಪ್ರಾಯೋಗಿಕ ವಿವಿರಗಳ ಮಾಹಿತಿಯೂ ಇರುವುದರಿಂದ, ಚಂದ್ರ ಶಕ್ತಿಯನ್ನು ಪಡೆಯುವುದು ಕಷ್ಟವೇನಲ್ಲ ಎಂದು ನಾಸಾ ಹೇಳಿದೆ. ೧೯೬೯ನೇ ಇಸವಿಯಿಂದಲೂ ಚಂದ್ರನ ಇಂಚಿಂಚನ್ನೂ ಶೋಧಿಸಿರುವ ನಾಸಾ, ಚಂದ್ರ ಶಕ್ತಿಯನ್ನು ಭೂಮಿಯ ಕಡೆಗೆ ಹರಿಸುವಲ್ಲಿ ಕಾರ್ಯನಿರತವಾಗಿದೆ. ಲೂನಾರ್ ( ಚಂದ್ರನ ) ಖಚ್ಚಾ ವಸ್ತುಗಳಿಂದಲೇ ಸೌರ ವಿದ್ಯುತ್ ಸ್ಥಾವರದ ನಿರ್ಮಾಣವಾಗಲಿದೆ. ಇದರಿಂದ ಖಚ್ಚಾ ವಸ್ತುಗಳ ಸಾಗಾಣಿಕೆಯ ಖರ್ಚು ಇಲ್ಲವಾದಂತಾಗುತ್ತದೆ. ನಂತರ ಈಗ ಇರುವ ತಂತ್ರವನ್ನೇ ಬಳಸಿಕೊಂಡು ಭೂಮಿಯಿಂದಲೇ ಎಲ್ಲವನ್ನೂ ನಿಯಂತ್ರಿಸಲಾಗುತ್ತದೆ.

ಕಾರ್ಯ ಹೀಗೆ: ಚಂದ್ರನಿಂದ ವಿದ್ಯುತ್ ಉತ್ಪಾದನೆಯಾಗಿ, ಚಂದ್ರನ ಪೂರ್ವ ಮತ್ತು ಪಶ್ಚಿಮ ಭಾಗಗಳಲ್ಲಿ ಸೌರ ವಿದ್ಯುತ್ ಫಲಕಗಳನ್ನು ಸ್ಥಾಪಿಸಲಾಗುತ್ತದೆ.ಈ ಫಲಕಗಳು ವಿದ್ಯುತ್ತನ್ನು ಉತ್ಪಾದಿಸಿ, ನೆಲದಲ್ಲಿ ಹೂತಿರುವ ತಂತಿಗಳ ಮೂಲಕ, ಮೈಕ್ರೋವೇವ್ ಜನರೇಟರ್‌ಗಳಿಗೆ ಮುಟ್ಟಿಸುತ್ತವೆ. ಆ ಮೈಕ್ರೋವೇವ್ ಜನರೇಟರ್‌ಗಳು ವಿದ್ಯುತ್ತನ್ನು ಮೈಕ್ರೋವೇವ್‌ಗಳಾಗಿ ಪರಿವರ್ತಿಸಿ, ಭೂಮಿಯ ಕಡೆ ಮುಖ ಮಾಡಿರುವ ಪ್ರತಿಫಲನ ಫಲಕಗಳ ಮೂಲಕ ಭೂಮಿಗೆ ರವಾನಿಸುತ್ತವೆ (ಮೈಕ್ರೋವೇವ್‌ಗಳು ಶೂನ್ಯದಲ್ಲಿಯೂ ಚಲಿಸುತ್ತವೆ.). ಭೂಮಿಯಲ್ಲಿರುವ ವಿಶೇಷ ಅಂಟೇನಾಗಳು ಮೈಕ್ರೋವೇವ್‌ಗಳನ್ನು ಸ್ವೀಕರಿಸಿ ಪುನಃ ವಿದ್ಯುತ್ತಾಗಿ ಪರಿವರ್ತಿಸುತ್ತವೆ.

ಮನುಷ್ಯನಿಗೆ ಯಾವುದೂ ಅಸಾಧ್ಯವಲ್ಲ. ಚಂದ್ರ ಶಕ್ತಿ ಮಾತ್ರ ಬರುವ ವರ್ಷಗಳ ಕತ್ತಲೆಯನ್ನು ಹೋಗಲಾಡಿಸುವ ಬೆಳಕಾಗಬಲ್ಲದು. ಸೌರ ಸ್ಥಾವರಗಳನ್ನು ಚಂದ್ರನ ಮೇಲೆ ಸ್ಥಾಪಿಸುವುದು ಸುಲಭದ ಮಾತೇನಲ್ಲ. ವರ್ಷಗಟ್ಟಲೇ ಹಲವರು ಅಲ್ಲಿ ದುಡಿಯಬೇಕಾಗುತ್ತದೆ. ಅದಕ್ಕಾಗುವ ಖರ್ಚೂ ಅತ್ಯಧಿಕ. ಆದರೆ ಒಮ್ಮೆ ಸ್ಥಾಪಿಸಿ ಬಂದ ಮೇಲೆ ಅದು ತಾನು ಬಳಸಿಕೊಂಡ ಎಲ್ಲಾ ಖರ್ಚನ್ನೂ ಮರಳಿ ಕೊಡುತ್ತದೆ. ಜೊತೆಗೆ ವರ್ಷಕ್ಕೆ ಬೇಕಾಗುವ ಎಲ್ಲಾ ವಿದ್ಯುತ್ತನ್ನೂ ಚಂದ್ರನ ಮೇಲಿನ ಒಂದೇ ಸ್ಥಾವರ ಕೊಡುವುದರಿಂದ ಲಾಭ ಅಧಿಕವೇ. ಜೊತೆಗೆ ಮಾಲಿನ್ಯ ಮುಕ್ತ ಪರಿಸರವೂ ನಮ್ಮದಾಗುತ್ತದೆ.