ಹೌದು, ಚಂದ್ರನಲ್ಲೂ ಮನೆಗಳನ್ನು ಕಟ್ಟಬೇಕು. ಅಲ್ಲೂ ಬಡಾವಣೆಗಳನ್ನು ನಿರ್ಮಿಸಬೇಕು. ಅಲ್ಲೂ ನಗರಗಳನ್ನು ಕಟ್ಟಬೇಕು ಎಂಬುದು ಮಾನವನ ಆಸೆಗಳಲ್ಲಿ ಒಂದು. ಈಗ ಆ ಆಸೆ ಪಕ್ವವಾಗುವ ಕಾಲ ಬಂದಿದೆ. ಚಂದ್ರನ ನೆಲದಲ್ಲಿ ಕಟ್ಟುವಂತಹ ಇಟ್ಟಿಗೆಗಳನ್ನು ಈಗ ಅಮೆರಿಕಾದ 'ವರ್ಜೀನಿಯಾ ಟೆಕ್ನಾಲಜೀಸ್' ಸಂಸ್ಥೆಯ ಕಾಲೇಜ್ ಆಫ್ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಈ ಕ್ರಾಂತಿಕಾರಿ ಶೋಧವನ್ನು ಮಾಡಿದ್ದಾರೆ. ಇನ್ನು ಚಂದ್ರನ ಮೇಲೆ ಮನೆಯನ್ನೂ ಕಟ್ಟಬಹುದು, ನಗರಗಳನ್ನೂ ನಿರ್ಮಿಸಬಹುದು.
ಇದರಲ್ಲೇನು ವಿಶೇಷ:
ಅಚ್ಚಿಗೆ ಹೊಯ್ದು ಯಾವುದೇ ಆಕಾರಕ್ಕೆ ಬರುವಂತೆ ಈ 'ಚಂದ್ರ ಕಟ್ಟಡ' ಸಾಮಾಗ್ರಿಯನ್ನು ತಯಾರಿಸಲಾಗಿದೆ. ಅಲ್ಯೂಮಿನಿಯಂನ ಪುಡಿಯಲ್ಲಿ ಚಂದ್ರನ ಮೇಲೆ ಸಿಗುವ ಕಲ್ಲುಗಳಂಥ ವಸ್ತುಗಳನ್ನು ಪುಡಿಮಾಡಿ, ಈ ಅಲ್ಯೂಮಿನಿಯಂ ಪುಡಿಯ ಜತೆ ಬೆರೆಸಿ ತಯಾರಿಸಲಾಗಿದೆ. ಇಟ್ಟಿಗೆಯ ಆಕಾರಕ್ಕೆ, ತಾರಸಿಗೆ ಹಾಕುವ ಕಲ್ನಾರ್ ಶೀಟ್ ಮಾದರಿಗೆ ಇದನ್ನು ತಯಾರಿಸಿಕಳ್ಳಬಹುದು. ಹೀಗೆ ಪುಡಿಗಳನ್ನು ಚಂದ್ರನಿಗೆ ಕೊಂಡೆಯ್ದು ಅಲ್ಲಿ ಮಿಶ್ರಣ ಮಾಡಿ, ವಿಶೇಷ ಅಂಟಿನ ಮೂಲಕ ಬಂಧಿಸಿ ಮನೆಗಳನ್ನು ಕಟ್ಟಬಹುದು ಎಂದು ತೋರಿಸಿಕೊಟ್ಟಿದ್ದಾರೆ.
ಕಾಲೇಜಿನ ವಸ್ತು ವಿಜ್ಞಾನ ಮತ್ತು ಎಂಜಿನಿಯರಿಂಗ್ ಹಾಗೂ ಹ್ಯಾಂಪ್ಟನ್‌ನ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಯ ಪ್ರಾಧ್ಯಾಪಕಿ ಕ್ಯಾಥರೀನ್ ಲೋಗಾನ್ ಹಾಗೂ ೭ ವಿದ್ಯಾರ್ಥಿಗಳು ಈ ಮಹತ್ವ ಸಂಶೋಧನೆಯನ್ನು ಮಾಡಿದ್ದಾರೆ. ಸೈನ್ಯದಲ್ಲಿ ಬಾಂಬ್‌ಗಳ ಒಡೆತವನ್ನು ತಡೆದುಕೊಳ್ಳಲು ಅಲ್ಯೂಮಿನಿಯಂ ಹಾಗೂ ಪಿಂಗಾಣಿ ಪುಡಿಯ ಮಿಶ್ರಣದಿಂದ ತಯಾರಿಸಿದ್ದ ಕವಚಗಳು ಅತಿ ಗಟ್ಟಿಯಾಗಿ ಇರುತ್ತಿದ್ದ ಕಾರಣ, ಇಂಥಹ ವಸ್ತುವನ್ನೇ ಏಕೆ ಚಂದ್ರನಲ್ಲಿ ಕಟ್ಟಡ ನಿರ್ಮಾಣಕ್ಕೆ ಬಳಸಬಾರದು ಎಂಬ ಯೋಚನೆ ಬಂದಿತಂತೆ. ಹಾಗಾಗಿ ಲೋಗಾನ್ ಆಕೆಯ ವಿದ್ಯಾರ್ಥಿ ತಂಡಗಳೊಂದಿಗೆ ವಿಶ್ವದ ನಾನಾ ಭಾಗಗಳ ನಿಷ್ಕ್ರಿಯ ಜ್ವಾಲಾಮುಖಿಗಳಿಗೆ ತೆರಳಿ, ಅಲ್ಲಿ ರಾಶಿ ರಾಶಿಯಾಗಿ ಬಿದ್ದಿರುತ್ತಿದ್ದ ಜ್ವಾಲಾಮುಖಿ ಬೂದಿಯನ್ನು ಸಂಗ್ರಹಿಸಿ, ಅದನ್ನು ಸಂಸ್ಕರಿಸಿ ವಿಶೇಷ ಪುಡಿಯನ್ನು ತಯಾರಿಸಿದರು. ಜ್ವಾಲಾಮುಖಿಯ ಬೂದಿಯಲ್ಲಿ ಭೂಗರ್ಭದ ನಾನಾ ರೀತಿಯ ಲೋಹಗಳು ಸೇರಿ ಹೋಗಿರುವುದರಿಂದ ಅದಕ್ಕೆ ವಿಶೇಷ ಶಾಖ ತಡೆಯುವ ಇರುತ್ತದೆ ಎಂದು ಲೆಕ್ಕ ಮಾಡಲಾಯಿತು. ಹಾಗೆ ಸಂಗ್ರಹಗೊಂಡ ಪುಡಿಯನ್ನು ಅಲ್ಯೂಮಿನಿಯಂ ಪುಡಿಯೊಂದಿಗೆ ಬೆರೆಸಿ, ವಿಶೇಷ ಅಂಟೊಂದರ ಸಹಾಯದಿಂದ ಅಚ್ಚುಗಳಿಗೆ ಹಾಕಿ ಇಟ್ಟಿಗೆಗಳನ್ನು ತಯಾರಿಸಲಾಯಿತು. ಅದನ್ನು ವಿವಿಧ ತಾಪಮಾನಗಳಲ್ಲಿ ಪರೀಕ್ಷಿಸಿ ಯಶಸ್ವಿಯಾದ ಬಲಿಕ ಅದನ್ನು ಚಂದ್ರನಲ್ಲಿ ಬಳಸಲು ಸಾಧ್ಯ ಎಂಬ ತೀರ್ಮಾನಕ್ಕೆ ಬರಲಾಯಿತು. ಹೀಗೆ ಯಾವ ಆಕಾರ ಬೇಕೋ ಆ ಆಕಾರದ ಅಚ್ಚುಗಳನ್ನು ತಯಾರಿಸಿಕೊಂಡು, ಅದರಲ್ಲಿ ಬೇಕಾದ ಗಾತ್ರದ, ಆಕಾರದ ಇಟ್ಟಿಗೆಗಳನ್ನು ಸುಲಭವಾಗಿ ಮಾಡಿಕಳ್ಳಬಹುದು. ಎಂದು ಪ್ರಾಯೋಗಿಕವಾಗಿಯೂ ತೋರಿಸಲಾಯಿತು. ಅಲ್ಲದೆ, ಗರಿಷ್ಟ ೨,೭೦೦ ಡಿಗ್ರಿ ಫ್ಯಾರನ್‌ಹೀಟ್‌ಗೆ ಶಾಖವನ್ನು ಏರಿಸಿ ಪರೀಕ್ಷಿಸಲಾಗಿ, ಅದು ಭದ್ರವಾಗಿ ಅಸ್ತಿತ್ವ ಉಳಿಸಿಕೊಂಡ ಕಾರಣ, ಈಗ ಚಂದ್ರನ ಮೇಲೆ ಕಟ್ಟಡ ಕಟ್ಟುವುದು ಇದರಿಂದ ಸಾಧ್ಯ ಎಂಬ ನಿರ್ಧಾರಕ್ಕೆ ಬರಲಾಗಿದೆ. ಇದಕ್ಕೆ ನಾಸಾ ಸೇರಿದಂತೆ, ಹಲವು ವಿಶ್ವವ್ಯಾಪಿ ಬಾಹ್ಯಾಕಾಶ ಸಂಸ್ಥೆಗಳು ತಮ್ಮ ಹಸಿರು ನಿಶಾನಯನ್ನೂ ಸೂಚಿಸಿವೆ.
ಒಮ್ಮೆ ಮನೆಯನ್ನು ಈ ವಸ್ತುಗಳನ್ನು ಬಳಸಿ ಕಟ್ಟಿದ ಮೇಲೆ, ಮನೆಯ ಒಳಗೆ ಮನುಷ್ಯನಿಗೆ ಬೇಕಾದ ತಾಪಮಾನವನ್ನು ಹವಾನಿಯಂತ್ರಣ ಯಂತ್ರಗಳ ಮೂಲಕ ನಿಯಂತ್ರಿಸಬಹುದು. ಅದಕ್ಕೆ ಬೇಕಾಗುವ ವಿದ್ಯುತ್ ಸಹ, ಅಲ್ಲಿನ ಅಪಾರ ಸೌರಶಕ್ತಿಯಿಂದ ಸಿಗುತ್ತದೆ.