ಸೋಮವಾರ, ನವೆಂಬರ್ 17, 2008

ಸೃಷ್ಟಿ ಹೇಗಾಯಿತು ಗೊತ್ತೇನು?


ಸ್ವಿಟ್ಸರ್‌ಲ್ಯಾಡಿನ ಸಿಇಆರ್‌ಎನ್ (ಕೌನ್ಸಿಲ್ ಯೂರೋಪಿಯನ್ ಪೌಲ್ ಲಾ ರಿಸರ್ಚ್ ನ್ಯೂಕ್ಲಿಯರೆ) ಕೆಲವು ದಿನಗಳ ಹಿಂದೆ ವಿಶ್ವ ಸೃಷ್ಟಿಯಾದದ್ದು ಹೇಗೆ ಎಂಬುದನ್ನು ಪ್ರಾಯೋಗಿಕವಾಗಿ ತೋರಿಸಲು ಹೋಗಿ ಸುದ್ದಿಯಾಗಿತ್ತು. ಆ ಪ್ರಯೋಗ ಇನ್ನೂ ನಿಂತಿಲ್ಲ. ಈ ಎಲ್ಲ ಪ್ರಯೋಗಕ್ಕೂ ಮೂಲ ಧಾತು ಏನು ಗೊತ್ತೇ , ಪ್ರತಿ ವಸ್ತು. ಈಗದರ ಬಗ್ಗೆ ತಿಳಿಯೋಣ ಬನ್ನಿ...

ದು ನಾಳೆಯ ಶಕ್ತಿಯ ಮೂಲ. ಇದಕ್ಕೆ ಅಣುಶಕ್ತಿಗಿಂತಾ ಸಾವಿರ ಪಟ್ಟು ಹೆಚ್ಚು ಶಕ್ತಿ. ಶೇಕಡಾ ನೂರಕ್ಕೆ ನೂರರಷ್ಟು ಕಾರ್ಯಕ್ಷಮತೆ. ತ್ಯಾಜ್ಯವಿಲ್ಲ. ಅಣುವಿಕಿರಣವಿಲ್ಲ. ಮಾಲಿನ್ಯವಂತೂ ಇಲ್ಲವೇ ಇಲ್ಲ. ಕೆಲವೇ ಗ್ರಾಂಗಳಿಂದ ಬೆಂಗಳೂರಿನಂತಹ ನಗರಕ್ಕೆ ಒಂದು ವಾರ ವಿದ್ಯುತ್ ಪೂರೈಸಬಹುದು.


ಇದು ಪ್ರತಿವಸ್ತುವಿನ ವಿಚಾರ. ಸ್ವಿಟ್ಸರ್ ಲ್ಯಾಂಡಿನಲ್ಲಿರುವ ಸಿ.ಇ.ಆರ್.ಎನ್. (ಕೌನ್ಸಿಲ್ ಯೂರೋಪಿಯನ್ ಪೌರ್ ಲಾ ರಿಸರ್ಚ್ ನ್ಯೂಕ್ಲಿಯರೇ) ವಿeನಿಗಳು ವಿಶ್ವದಲ್ಲೇ ಮೊದಲ ಬಾರಿಗೆ ಪ್ರಪ್ರಥಮ ಪ್ರತಿವಸ್ತು ಕಣಗಳನ್ನು ತಯಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು ೭೦ ವರ್ಷಗಳ ಸಂಶೋಧನೆಯ ಫಲವಾಗಿ ಇಂದು ಮಾನವ ತನ್ನ ಭವಿಷ್ಯತ್ತಿನ ಶಕ್ತಿಯನ್ನು ಕಂಡುಕೊಂಡಿದ್ದಾನೆ.

ಹಾಗಿದ್ದರೆ, ಏನಿದು ಪ್ರತಿವಸ್ತು?: ಈ ಪ್ರತಿವಸ್ತುವಿನ ವಿಚಾರ ಇಡೀ ವಿಶ್ವದ ಅಳತೆಯಷ್ಟು ದೊಡ್ಡದಾದುದು. ಮಾನವನಿಗೆ ಭೂಮಿಯಾಚೆಗಿನ ಜೀವಿಗಳ ಬಗ್ಗೆ ಸದಾ ಆಸಕ್ತಿ. ಅದಕ್ಕಾಗಿ ಮನುಷ್ಯ ಮಾಡಿರುವ ಸಾಹಸಗಳು ಅಷ್ಟಿಷ್ಟಲ್ಲ. ಚಂದ್ರನ ಮೇಲೆ ಮೊದಲು ಕಾಲಿಡುವುದರಿಂದ ಹಿಡಿದು, ಮೊನ್ನೆ ಮೊನ್ನೆ ಟೆಂಪಲ್-೧ ಧೂಮಕೇತುವಿನ ಮೇಲೆ ಕಮರಿ ಸೃಷ್ಠಿಸುವ ಡೀಪ್ ಇಂಪ್ಯಾಕ್ಟ್ ತನಕವೂ ಅನ್ಯ ಜೀವಿಗಳಿಗಾಗಿ ಹುಡುಕಾಟ ನಡೆದೇ ಇದೆ. ಅನ್ಯ ಜೀವಿಗಳನ್ನು ಕುರಿತು ಇರುವ ಸಿದ್ಧಾಂತಗಳು ಕಡಿಮೆಯಲ್ಲ. ಅದರಲ್ಲಿ ಪ್ರಮುಖವಾದುದೇ ಪ್ರತಿವಸ್ತು ಸಿದ್ಧಾಂತ.


೧೯೨೮ರಲ್ಲಿ ಪಾಲ್ ಡ್ಯುರಾಕ್ ಎನ್ನುವ ವಿಜ್ಞಾನಿ ಪ್ರಪ್ರಥಮವಾಗಿ ಪ್ರತಿವಸ್ತು ಸಿದ್ಧಾಂತವನ್ನು ಮಂಡಿಸಿದನು. ಅವನ ಪ್ರಕಾರ ಭೂಮಿಯ ಮೇಲಿರುವ ಸಕಲವೂ ವಸ್ತುಗಳಿಂದ ರಚಿತವಾಗಿದ್ದರೆ, ಅದಕ್ಕೆ ವಿರುದ್ಧವಾದ ಪ್ರತಿವಸ್ತುವೊಂದು ಇರಲೇಬೇಕು. ನೋಡಲು ಸಾಕ್ಷಾತ್ ವಸ್ತುವಿನ ಪ್ರತಿಫಲನದಂತಿರುವ ಪ್ರತಿವಸ್ತು, ಅಣುರಚನೆಯಲ್ಲಿ ಮಾತ್ರ ವಸ್ತುವಿಗೆ ತದ್ವರುದ್ಧ. ಅಂದರೆ ವಿಶ್ವದ ಮತ್ಯಾವುದೋ ಮೂಲೆಯಲ್ಲಿ ಭೂಮಿಯ ಪ್ರತಿಫಲನದಂತಿರುವ ಮತ್ತೊಂದು ಗ್ರಹ ಇರಲೇಬೇಕು, ಹಾಗೆಯೇ ಜೀವಿಗಳೂ ಇರಬೇಕು. ಆದರೆ ಈ ಸಂಶೋಧನೆಯಲ್ಲಿ ತಿಳಿದದ್ದು ಈ ವಸ್ತು-ಪ್ರತಿವಸ್ತುಗಳು ಅಣುರಚನೆಯಲ್ಲಿ ಸಂಪೂರ್ಣ ತದ್ವಿರುದ್ಧವಾಗಿರುವುದರಿಂದ ಅವು ಒಂದನ್ನೊಂದು ಎಂದೂ ಸಂಧಿಸಲಾರವು! ಸಂಧಿಸಿದರೆ ಅಪಾರ ಪ್ರಮಾಣದ ಶಕ್ತಿ ಉತ್ಪತ್ತಿಯಾಗುತ್ತದೆ ಎಂದು!

ಆದರೆ ಈ ಪ್ರತಿವಸ್ತುವಿಗೆ ಏಕೆ ಅಷ್ಟು ಶಕ್ತಿ?: ಇದು ಬಹಳ ವಿಸ್ಮಯದ ಸಂಗತಿ. ವಸ್ತುವಿನ ಅಣುರಚನೆಯಲ್ಲಿ ಅಣುಕೇಂದ್ರದಲ್ಲಿನ ನ್ಯೂಕ್ಲಿಯಸ್ ಸುತ್ತಲೂ ಸುತ್ತುತ್ತಿರುವ ಎಲೆಕ್ಟ್ರಾನ್ ದಿಕ್ಕಿಗೆ ಸಂಪೂರ್ಣ ವಿರುದ್ಧ ದಿಕ್ಕಿನಲ್ಲಿ ಪ್ರತಿವಸ್ತುವಿನ ಎಲೆಕ್ಟ್ರಾನ್ ಸುತ್ತುತ್ತಿರುತ್ತದೆ. ಈ ತದ್ವಿರುದ್ಧ ರಚನೆಯ ಅಣುಗಳ ನಡುವೆ ಸಂಬಂಧ ಏರ್ಪಟ್ಟರೆ ಘರ್ಷಣೆಯಾಗಿ ಊಹೆಗೂ ನಿಲುಕದ ಶಕ್ತಿ ಬಿಡುಗಡೆಯಾಗುತ್ತದೆ. ಮನುಷ್ಯ ಕಂಡುಹಿಡಿದಿರುವ ಯಾವ ಸ್ಪೋಟಕಕ್ಕೂ ಇದಕ್ಕೆ ಸರಿಸಮನಾದ ಶಕ್ತಿಯಿಲ್ಲ. ಒಂದು ಗ್ರಾಂ ಪ್ರತಿವಸ್ತು, ಹಿರೋಷಿಮಾ ನಗರದ ಮೇಲೆ ಹಾಕಿದ ಅಣು ಬಾಂಬ್ (೨೦ ಕಿಲೋಟನ್) ನ ವಿಕಿರಣ ಶಕ್ತಿಗೆ ಸಮವಾಗುತ್ತದೆ!

ಆದರೆ ಪ್ರತಿವಸ್ತುವನ್ನು ತಯಾರಿಸುವುದು ಹೇಗೆ?: ನಾವು ಯಾವುದೇ ವಸ್ತುವಿನ ಪ್ರತಿವಸ್ತುವನ್ನು ತಯರಿಸಬಹುದು. ಉದಾಹರಣೆಗೆ ಜಲಜನಕದ ಅಣುವಿನಲ್ಲಿನ ಪ್ರೋಟಾನ್‌ಗಳನ್ನು ಟಂಗ್ಸಟನ್ ಲೋಹದ ತುಂಡೊಂದಕ್ಕೆ ಡಿಕ್ಕಿ ಹೊಡೆಸಿದಾಗ, ಲೆಕ್ಕವಿಲ್ಲದಷ್ಟು ಕಣಗಳು ಉತ್ಪತ್ತಿಯಾಗುತ್ತವೆ. ಆದರೆ ಅವುಗಳಲ್ಲಿ ಕೆಲವೇ ಕೆಲವು ಮಾತ್ರ ಪ್ರತಿ-ಪ್ರೋಟಾನ್‌ಗಳಾಗಿರುತ್ತವೆ. ಆ ಪ್ರತಿ-ಪ್ರೋಟಾನ್‌ಗಳನ್ನು ಸಂಗ್ರಹಿಸಿದರೆ ಅವೇ ಶಕ್ತಿಯ ಮೂಲಗಳಾಗುತ್ತವೆ. ಅದೇ ಪ್ರತಿ-ಜಲಜನಕ. ಆದರೆ ಸದ್ಯಕ್ಕೆ ಉತ್ಪಾದನಾ ವೆಚ್ಛ, ಅದರ ಪ್ರಯೋಜನಕ್ಕಿಂತಲೂ ಹೆಚ್ಚಿದೆ. ಮಿಲ್ಕೀವೇ ನಕ್ಷತ್ರ ಮಂಡಳದ ಮೇಲಿರುವ ಪ್ರತಿವಸ್ತು ಮೋಡದಿಂದ ಪ್ರತಿವಸ್ತು ತರುವಂತಾದರೆ ಇದು ಪ್ರಯೋಜನಕಾರಿ.


ಆದರೆ ಪ್ರತಿವಸ್ತುಗಳು ತುಂಬಾ ಸೂಕ್ಷ್ಮ ಸ್ವಭಾವದವಾಗಿವೆ. ಪ್ರತಿವಸ್ತುಗಳು ಯಾವುದೇ ಸಂದರ್ಭದಲ್ಲಿಯೂ ವಸ್ತುವಿನ ಜೊತೆ ಕೂಡಬಾರದು. ಗಾಳಿಯೊಂದಿಗೂ ಸಂಪರ್ಕಕ್ಕೆ ಬಂದು ಸಿಡಿಯುವ ಇವನ್ನು ನಿರ್ವಾತದ ಶೀಶೆಗಳಲ್ಲಿಯೇ (ಎಲೆಕ್ಟ್ರೋ ಮ್ಯಾಗ್ನೆಟಿಕ್ ಬಾಟೆಲ್) ಇಡಬೇಕು. ಕೆಲವೇ ಗ್ರಾಂ ಪ್ರತಿವಸ್ತುಗಳನ್ನು ನಿಯಂತ್ರಿತ ಸ್ಥಿತಿಯಲ್ಲಿ ಕೂಡಿಸಿ, ಅತಿ ದೊಡ್ಡ ನಗರಗಳಿಗೆ ವಾರಗಟ್ಟಲೇ ವಿದ್ಯುತ್ ಪೂರೈಸಬಹುದು. ವಿಕಿರಣ ಪೂರಿತ ಶಕ್ತಿಯ ಮೂಲಗಳಿಗೆ ಇನ್ನು ವಿದಾಯ ಹಾಡಬಹುದು. ಇದು ಕೊನೆಯೇ ಇಲ್ಲದ ಶಕ್ತಿಯ ಮೂಲ. ಇದು ಭೂಮಿಯನ್ನು ಉಳಿಸಬಹುದು. ಆದರೆ ನಾಶಮಾಡಲೂಬಹುದು.


ಈ ವಸ್ತು-ಪ್ರತಿವಸ್ತು ಕೂಡಿಸುವಿಕೆಯಲ್ಲಿನ ನಿಯಂತ್ರಣ ವ್ಯವಸ್ಥೆಯಲ್ಲಿ ಎಳ್ಳಷ್ಟು ಹೆಚ್ಚು ಕಡಿಮೆಯಾದರೂ ಅನಾಹುತ ಕಟ್ಟಿಟ್ಟ ಬುತ್ತಿ. ಸ್ವಲ್ಪವೇ ಅಜಾಗರೂಕತೆ ನಗರ ನಗರಗಳನ್ನೇ ಸುಟ್ಟುಬಿಡಬಹುದು. ಪ್ರತಿವಸ್ತುಗಳು ದುಷ್ಟರ ಕೈಗೆ ಸಿಕ್ಕಿದರಂತೂ ಭೂಮಿಯ ಆಯಸ್ಸು ಮುಗಿದಂತೆಯೇ. ಅದಕ್ಕಾಗಿಯೇ ಸಿ.ಇ.ಆರ್.ಎನ್. ತನ್ನ ಸಂಶೋಧನೆಯ ವಿವರಗಳನ್ನು ಬಹಿರಂಗಗೊಳಿಸಿಲ್ಲ.
ಭೂಮಿಯ ಮೇಲಿನ ಶಕ್ತಿಯ ಮೂಲಗಳು ಮುಗಿದೇ ಹೋದರೆ, ಶಕ್ತಿಗಾಗಿ ಪ್ರತಿವಸ್ತುವಿನ ಆಸರೆ ಅನಿವಾರ್ಯವಾದಾಗ ಮಾತ್ರ ಇದರ ಬಳಕೆ ಎಂದು ಸಿ.ಇ.ಆರ್.ಎನ್. ಹೇಳಿದೆ.

1 ಕಾಮೆಂಟ್‌:

ಗುಡುಗು ಮಿಂಚು ಹೇಳಿದರು...

ತುಂಬಾ ಅದ್ಬುತವಾದ ವಿಷಯ. ನಿಮ್ಮ ಬ್ಲಾಗ್ ಸಹ ತುಂಬಾ ಚೆನ್ನಾಗಿದೆ. ಮುಂದುವರಿಯಿರಿ.