ಸೋಮವಾರ, ನವೆಂಬರ್ 17, 2008

ಇದು ಬ್ರಹ್ಮಾಂಡದ ಜನ್ಮ ರಹಸ್ಯ!


ನದಿ ಮೂಲ, ಋಷಿ ಮೂಲ, ಸ್ತ್ರೀ ಮೂಲ, ಸುದ್ದಿ ಮೂಲಗಳನ್ನು ಹುಡುಕಬಾರದು ಎಂಬ ಮಾತಿದೆ. ಏಕೆಂದರೆ ಹುಡುಕಿದರೂ ಅವು ಸುಲಭವಾಗಿ ಸಿಗಲಾರವು. ಆದರೆ ವಿಜ್ಞಾನ ಈ ಮಾತನ್ನು ಪಾಲಿಸುವುದಿಲ್ಲ. ಕಾರಣ, ಬ್ರಹ್ಮಾಂಡದ ಜನ್ಮರಹಸ್ಯವನ್ನು ಭೇದಿಸುವ ಮಹತ್ತರ ಸಂಶೋಧನೆಯೊಂದು ನಡೆದಿದೆ.


ಇದನ್ನು ನಂಬಲು ಸ್ವಲ್ಪ ಕಷ್ಟವಾಗಬಹುದು. ಏಕೆಂದರೆ ಸುಮಾರು ೧೩.೭ ಬಿಲಿಯನ್ ವರ್ಷಗಳಷ್ಟು ಹಿಂದಿನ ಒಂದು ಬೆಳಕಿನ ಕಿರಣ ವಿಶ್ವದಲ್ಲಿ ಸಂಚರಿಸುತ್ತಾ, ವಿಲ್ಕಿನ್‌ಸನ್ ಮೈಕ್ರೋವೇವ್ ವೀಕ್ಷಕ ಉಪಗ್ರಹದ ಗ್ರಾಹಕಗಳಿಗೆ ಬಂದು ತಲುಪಿದೆ! ನಾಸಾದ ಗಾಡ್ಡಾರ್ಡ್ ಅಂತರಿಕ್ಷ ಕೇಂದ್ರವೂ ಸೇರಿದಂತೆ, ಅಮೆರಿಕಾದ ಸುಮಾರು ೯ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಈ ಉಪಗ್ರಹ ಯೋಜನೆಯಲ್ಲಿ ಪಾಲ್ಗೊಂಡಿದ್ದಾರೆ. ಸುಮಾರು ಮೂರು ವರ್ಷಗಳಷ್ಟು ಸತತ ಅಧ್ಯಯನ ನಡೆಸಿದ ಈ ಉಪಗ್ರಹ, ಬ್ರಹ್ಮಾಂಡದ ಉಗಮದ ಬಗ್ಗೆ ಮಹತ್ತರವಾದ ಸುಳಿವುಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.


ನಾವೆಲ್ಲಾ ಶಾಲಾ ಕಾಲೇಜುಗಳಲ್ಲಿ ವಿಶ್ವದ ಉಗಮದ ಬಗ್ಗೆ ಹಲವು ಸಿದ್ಧಾಂತಗಳನ್ನು ಓದಿದ್ದೇವೆ. ಅದರಲ್ಲಿ ಪ್ರಮುಖವಾದದ್ದು ಬಿಗ್ ಬ್ಯಾಂಗ್ ಸಿದ್ಧಾಂತ (ಮಹಾಸ್ಪೋಟ). ಈ ಸಿದ್ಧಾಂತದ ಪ್ರಕಾರ ಈಗ ನಾವು ಕಾಣುತ್ತಿರುವ ಅನಂತ ವಿಸ್ತಾರದ ವಿಶ್ವ, ಹಿಂದೆ ಕೆಲವೇ ಕೆಲವು ಮಿಲಿಮೀಟರ್‌ಗಳಷ್ಟು ವಿಸ್ತೀರ್ಣದಲ್ಲಿ ಒಟ್ಟುಗೂಡಿತ್ತು. ಬಹು ಶಾಖದಿಂದ ಕೂಡಿದ ಅನಿಲಗಳ ಆ ಗುಂಪು, ಯಾವುದೋ ಹಂತದಲ್ಲಿ ಶಾಖ ಹಾಗೂ ಒತ್ತಡದ ಮಿತಿ ಮೀರಿದ್ದರಿಂದ ಸ್ಪೋಟಗೊಂಡು ವಿಸ್ತರಿಸುತ್ತಾ ಹೋಯಿತು. ಇಂದು ನಾವು ಕಾಣುತ್ತಿರುವ ನಕ್ಷತ್ರಪುಂಜಗಳು, ಗ್ರಹಗಳು, ಧೂಮಕೇತುಗಳು, ಕ್ಷುದ್ರಗ್ರಹಗಳು, ಈ ಮಹಾಸ್ಫೋಟದ ಮಕ್ಕಳು. ಇದು ೧೩.೭ ಬಿಲಿಯನ್ ವರ್ಷಗಳಲ್ಲಿ ನಡೆದಿರುವ ಕ್ರಿಯೆ! ಆದರೆ ಇದನ್ನು ನಿರೂಪಿಸಿ ತೋರಿಸುವುದು ಕಷ್ಟದ ಮಾತು. ಅದಕ್ಕೆ ನಾವು ಆ ಮಹಾಸ್ಫೋಟವಾದ ಕ್ಷಣದ ಸಮಯಕ್ಕೆ ಹೋಗಿ ನಿಲ್ಲಬೇಕಾಗುತ್ತದೆ.


ಈಗ ನಮಗೆ ದೊರೆತಿರುವ ಈ ಪ್ರಾಚೀನಾತಿ ಪ್ರಾಚೀನ ಬೆಳಕಿನ ಕಿರಣ, ಮಹಾಸ್ಫೋಟವಾದ ಕ್ಷಣದಲ್ಲಿ ಬಿಡುಗಡೆಯಾಗಿರುವಂಥದ್ದು. ಈ ಕಿರಣ ತನ್ನ ಒಡಲಿನಲ್ಲಿ ಆ ಸಮಯದ ಹಲವು ವಿಷಯಗಳನ್ನು ಇಟ್ಟುಕೊಂಡಿರುವ ಸಾಕ್ಷಿಯಾಗಿದೆ. ವಿಜ್ಞಾನಿಗಳು ಹೇಳುವ ಪ್ರಕಾರ, ಆ ಕಿರಣ ಬಹಳ ದುರ್ಬಲವಾಗಿದ್ದರೂ, ಮಹಾಸ್ಫೋಟಗೊಂಡ ಒಂದು ಸೆಕೆಂಡಿನ ಮೊದಲನೇ ಟ್ರಿಲಿಯನ್ (೧ ರ ಮುಂದೆ ಹನ್ನೆರಡು ಸೊನ್ನೆ) ಭಾಗದಲ್ಲಿ ನಡೆದಿರುವ ಘಟನೆಗಳು ನಮಗೆ ಅದರಿಂದ ಸಿಗುತ್ತವೆ!
ಈ ಸಂಶೋಧನೆ, ವಿಶ್ವದ ವಯಸ್ಸು, ತಿರುಳು, ಬೆಳವಣಿಗೆ, ಆಯಸ್ಸುಗಳ ಬಗ್ಗೆ ಮಹತ್ತರವಾದ, ನಿಖರ ಮಾಹಿತಿಗಳನ್ನು ಕೊಟ್ಟಿದೆ. ಈಗ ದೊರೆತಿರುವ ಪ್ರಾಚೀನ ಬೆಳಕಿನ ಕಿರಣವನ್ನು ಆಧಾರವಾಗಿಟ್ಟುಕೊಂಡು, ಶಿಶು ವಿಶ್ವದ ವಿವರಣಾತ್ಮಕ ಚಿತ್ರವನ್ನು ವಿಜ್ಞಾನಿಗಳು ಸೃಷ್ಠಿಸಿದ್ದಾರೆ. ಮಹಾಸ್ಪೋಟದ ನಂತರ ಹುಟ್ಟಿದ ಶಿಶು ನಕ್ಷತ್ರಗಳ ಕಾಲದಿಂದ (೪೦೦ ಮಿಲಿಯನ್ ವರ್ಷ) ಹಿಡಿದು, ಪ್ರಸ್ತುತ ನಮ್ಮ ವಿಶ್ವದ ರಚನೆಯ ಚಿತ್ರಣ ಅದರಲ್ಲಿದೆ.


ಈ ಸಂಶೋಧನೆಯಿಂದ ತಿಳಿದುಬಂದಿರುವ ಮಹತ್ತರದ ವಿಷಯವೆಂದರೆ, ನಾವು ಇದುವರೆಗೆ ವಿಶ್ವದ ಕಡೆಗೆ ದೃಷ್ಟಿ ಹಾಯಿಸಿರುವುದು ಕೇವಲ ಶೇ.೪ ರಷ್ಟು ಮಾತ್ರ ಎಂದು! ಅಂದರೆ ಉಳಿದ ಶೇ.೯೬ ಪ್ರದೇಶ ನಿಗೂಢವಾಗಿಯೇ ಉಳಿದಿದೆ. ಆದರೆ ಈಗ ಆ ನಿಗೂಢ ವಿಶ್ವಕ್ಕೆ ದಾರಿ ದೊರೆತಿದೆ. ವಿಜ್ಞಾನಿಗಳ ಪ್ರಕಾರ ಅದು ವಿಶ್ವದ ಶಕ್ತಿಯ ಮೂಲ. ಅದರ ಬಳಕೆ ನಮಗೆ ಬೇಕು ಎನ್ನುವುದು ಇದರ ಅರ್ಥವಲ್ಲ. ವಿಶ್ವ ಉಸಿರಾಡುತ್ತಿರುವುದೇ ಅದರ ಶಕ್ತಿಯಿಂದ. ಮನುಷ್ಯನ ತಿಳಿಯುವ ಹಂಬಲ, ಸಾಹಸಗಳಿಗೆ ಇದು ಮತ್ತೊಂದು ಮೆಟ್ಟಿಲಾಗಲಿದೆ. ಆ ಶೇ.೯೬ ಪ್ರದೇಶದಲ್ಲಿ ನಮಗೆ ಈಗಿರುವ ವಿಶ್ವದ ಕಲ್ಪನೆಯನ್ನೂ ಮೀರಿ, ವಿಭಿನ್ನವಾದಂತಹ ಮತ್ತೊಂದು ಜಗತ್ತೇ ಕಾಣಬಹುದು. ಇವತ್ತಿಗೂ ರಹಸ್ಯವೇ ಆಗಿ ಉಳಿದಿರುವ ಅನ್ಯಗ್ರಹ ಜೀವಿಗಳ ಆವಾಸ ಸ್ಥಳ ಅದಾಗಿರಬಹುದು. ಫ್ಲೈಯಿಂಗ್ ಸಾಸರ್‌ಗಳು ಅಲ್ಲಿಂದಲೇ ಹಾರಿಬರುತ್ತಿರಬಹುದು.


ವಿಶ್ವದ ಆಯಸ್ಸಿನ ಮುಂದೆ ಭೂಮಿ, ನಕ್ಷತ್ರಗಳ ಆಯಸ್ಸು ಹುಲ್ಲುಕಡ್ಡಿಯಿದ್ದಂತೆ. ವಿಜ್ಞಾನಿಗಳ ಪ್ರಕಾರ ವಿಶ್ವ ಈಗ ಸಾವಿನ ಹತ್ತಿರ ಬಂದಿದೆ. ನಮಗೆ ಗೊತ್ತಿಲ್ಲದ ಆ ಶೇ.೯೬ ಪ್ರದೇಶದ ಚಟುವಟಿಕೆಗಳು ಮತ್ತೊಂದು ಮಹಾಸ್ಫೋಟಕ್ಕೆ ಕಾರಣವಾಗುವ ಸೂಚನೆಗಳನ್ನು ನೀಡಿವೆ. ಆಗ ಮತ್ತೊಂದು ಹೊಸ ವಿಶ್ವದ ಉಗಮವಾಗಬಹುದು. ಹುಟ್ಟಿದೆಲ್ಲಾ ಸಾಯಲೇಬೇಕು ಎನ್ನುವುದು ಇದಕ್ಕಾಗಿಯೇ. ಹಾಗೆಂದು ನಾವು ಹೆದರಬೇಕಿಲ್ಲ. ಅದಕ್ಕೆ ಮತ್ತಷ್ಟು ಬಿಲಿಯನ್ ವರ್ಷಗಳು ಬೇಕಾದರೂ ಆಗಬಹದು.
ಮನುಷ್ಯನ ಬುದ್ಧಿ ಶಕ್ತಿಗೆ, ಸಾಹಸ ಪ್ರವೃತ್ತಿಗೆ ಈ ಸಂಶೋಧನೆ ಒಂದು ದೊಡ್ಡ ಸವಾಲು. ಈ ಸಂಶೋಧನೆಯನ್ನು ಇಟ್ಟುಕೊಂಡು ನಾವು ಮತ್ತಷ್ಟು ವಿಷಯಗಳನ್ನು ಬೆಳಕಿಗೆ ತರಬೇಕಾಗಿದೆ. ನಮ್ಮ ಮುಂದಿನ ಪೀಳಿಗೆಗೆ ಈ ಸಂಶೋಧನೆ ಊರುಗೋಲಾಗಲಿದೆ.

ಕಾಮೆಂಟ್‌ಗಳಿಲ್ಲ: