ಶುಕ್ರವಾರ, ನವೆಂಬರ್ 21, 2008

ಜೀವ ಕಣ, ದೇವ ಕಣ!


ಸ್ಟೆಮ್ ಸೆಲ್‌ನಿಂದ ಸಾಧ್ಯ ಲಿವರ್ ಪುನರ್ ಸೃಷ್ಟಿ

ಸ್ಟೆಮ್ ಸೆಲ್‌ಗಳ ಬಗ್ಗೆ ನೀವೀಗಾಗಲೇ ಕೇಳಿರಬಹುದು. ಹೊಕ್ಕಳ ಬಳ್ಳಿಯಿಂದ ತೆಗೆಯುವ ಜೀವಕೋಶಗಳಿಂದ ದೇಹದ ಎಲ್ಲ ಅಂಗಾಂಗಳನ್ನೂ ರಚಿಸಲು ಸಾಧ್ಯವಾಗುತ್ತದೆ ಎಂದು ವಿಜ್ಞಾನಿಗಳ ಜಗತ್ತಿಗೆ ತೋರಿಸಿಕೊಟ್ಟಾಗ ದೊಡ್ಡ ಸಂಚಲನೆಯೇ ಉಂಟಾಗಿತ್ತು. ಈಗ ಸ್ಟೆಮ್ ಸೆಲ್ ಮತ್ತೆ ಸುದ್ದಿ ಮಾಡಿದೆ. ಸ್ಟೆಮ್ ಸೆಲ್‌ನ್ನು ಬಳಸಿಕೊಂಡು ಗಾಯಗೊಂಡ ಲಿವರ್‌ನ್ನು ಪುನರ್‌ಸೃಷ್ಟಿ ಮಾಡುವ ಕೆಲಸದಲ್ಲಿ ವಿಜ್ಞಾನಿಗಳು ಸಫಲರಾಗಿದ್ದಾರೆ!

ಅತ್ಯಂತ ಆಶ್ಚರ್ಯಕಾರಿ ಅಂಶವೇನೆಂದರೆ, ದೇಹದಲ್ಲಿರುವ, ಗಾಯಗೊಂಡರೂ ತನಗೆ ತಾನೆ ಮತ್ತೆ ಪುನರ್ ರಚಿತವಾಗಬಲ್ಲ ಶಕ್ತಿಯಿರುವುದು ಲಿವರ್‌ಗೆ ಮಾತ್ರ. ಲಿವರ್ ಕೋಶಗಳು ಮಾತ್ರ, ಮತ್ತೆ ಉತ್ಪತ್ತಿಯಾಗಿ ಗಾಯಗೊಂಡ ಭಾಗವನ್ನು ಸರಿಪಡಿಸಿಕೊಳ್ಳುತ್ತದೆ. ಲಿವರ್‌ನ್ನು ಬಿಟ್ಟರೆ ದೇಹದಲ್ಲಿನ, ಚರ್ಮ ಕೋಶಗಳು ಪುನರುತ್ಪತ್ತಿಗೊಳ್ಳುವ ಶಕ್ತಿ ಹೊಂದಿವೆ. ದಿನವೊಂದಕ್ಕೆ ನಾವು ನಮ್ಮ ಚರ್ಮದಿಂದ ಕಳೆದುಕಳ್ಳುವ ಜೀವಕೋಶಗಳ ಸಂಖ್ಯೆ ಬಿಲಿಯನ್‌ಗಳಿಗೂ ಮೀರುತ್ತದೆ. ನಮ್ಮ ಚರ್ಮದ ಮೇಲೆ ಸುಮ್ಮನೆ ಕೈ ಸವರಿದರೂ ಎಷ್ಟೋ ಕೋಶಗಳು ನಷ್ಟವಾಗುತ್ತವೆ. ಆದರೆ ಕೊಂಚವೇ ಸಮಯದಲ್ಲಿ ಅವು ಪುನರುತ್ಪತ್ತಿಗೊಳ್ಳುತ್ತವೆ. ಹಾಗೆಯೇ ಲಿವರ್ ಕೋಶಗಳೂ ಪುನರುತ್ಪತ್ತಿಗೊಳ್ಳುವ ಶಕ್ತಿ ಹೊಂದಿವೆ. ಹಾಗಾಗಿ ಕುಡಿತ ಹಾಗೂ ಇತ್ಯಾದಿ ಕಾರಣಗಳಿಂದಾಗಿ ಲಿವರ್‌ಗೆ ಘಾಸಿಯಾದರೆ ಕೆಲವು ತಿಂಗಳುಗಳಲ್ಲಿ ಲಿವರ್ ಸರಿಹೊಂದುತ್ತದೆ. ಆದರೆ ಅತಿಯಾಗಿ ಘಾಸಿಯಾಗಿದ್ದರೆ?!

ಆಗ ಲಿವರ್ ವಾಸಿಯಾಗುವುದು ಅತಿ ನಿಧಾನ. ಆಗ ದೇಹಕ್ಕೆ ಬೇಕಾದ ಜೀವರಸಗಳು ಲಿವರ್‌ನಿಂದ ಪೂರೈಕೆಯಾಗದೆ ವ್ಯಕ್ತಿ ಸಾಯುತ್ತಾನೆ. ಅಲ್ಲದೆ, ವ್ಯಕ್ತಿಯ ಲಿವರ್ ಆಗಲೇ ಸಾಕಷ್ಟು ಬಾರಿ ಘಾಸಿಗೊಂಡು ವಾಸಿಯಾಗಿದ್ದು, ಮತ್ತೆ ಘಾಸಿಯಾದರೆ ವಾಸಿಯಾಗುವುದು ಕಷ್ಟವಾಗುತ್ತದೆ. ಈ ಸಮಸ್ಯೆಗೆ ಈಗ ಪರಿಹಾರ ಸಿಕ್ಕಿದೆ ಸ್ಟೆಮ್ ಸೆಲ್ (ಲೇಖನದ ಕೊನೆಯಲ್ಲಿ ಸ್ಟೆಮ್ ಸೆಲ್‌ನ ವ್ಯಾಖ್ಯಾನವಿದೆ) ಗಳನ್ನು ಬಳಸಿ ಲಿವರ್‌ನ್ನು ಪುನರ್ ಸೃಷ್ಟಿ ಮಾಡುವ ವಿಧಾನವನ್ನು ವಿಜ್ಞಾನಿಗಳು ಸಂಶೋಧಿಸಿದ್ದಾರೆ.

ಹೇಗಿದು ಸಾಧ್ಯ: ಲಿವರ್ ಸಮಸ್ಯೆಗಳ ಸಂಶೋಧನೆಯಲ್ಲಿ ತೊಡಗಿದ್ದ ಅಮೆರಿಕಾದ ಪೆನ್ಸಿಲ್‌ವೇನಿಯಾದ ವಿಜ್ಞಾನಿಗಳು ಸ್ಟೆಮ್ ಸೆಲ್‌ನ ಮೂಲಕ ದೇಹದ ಅತಿ ಹಳೆಯ ಲಿವರ್ ಕೋಶವನ್ನು ಪತ್ತೆ ಮಾಡಿ, ನಕಲು ಮಾಡುವ ಸಾಧ್ಯತೆಗಳನ್ನು ತೋರಿಸಿಕೊಟ್ಟಿದ್ದಾರೆ. ಈ ಮೂಲಕ ಲಿವರ್ ಕೋಶಗಳನ್ನು ಉತ್ಪಾದಿಸಿ, ಗಾಯಗೊಂಡ ಲಿವರ್‌ಗೆ ಹೊಸ ಜೀವಕೋಶಗಳನ್ನು ಕಸಿ ಮಾಡುವ ಮೂಲಕ ವ್ಯಕ್ತಿಗೆ ಜೀವದಾನ ಮಾಡಲು ಮಾರ್ಗ ಹಾಕಿಕಟ್ಟಿದ್ದಾರೆ. ಅಮೆರಿಕಾ ಲಿವರ್ ಫೌಂಡೇಶನ್ ಪ್ರಕಾರ, ಈ ಸುದ್ದಿಯನ್ನು ಕೇಳಿ ಈಗಾಗಲೇ ೧೭ ಸಾವಿರ ಅಮೆರಿಕನ್ನರು ಲಿವರ್ ದುರಸ್ತಿಗಾಗಿ ಮಾಡಿಸಿಕೊಳ್ಳಲು ಕಾದು ನಿಂತಿದ್ದಾರಂತೆ!

ಒಬ್ಬ ಆರೋಗ್ಯವಂತ ವ್ಯಕ್ತಿಯ ಲಿವರ್‌ನಲ್ಲಿ, ಲಿವರ್ ಜೀವಕೋಶಗಳು ಕ್ರಮಬದ್ಧವಾಗಿ ಜೋಡಿತಗೊಂಡಿದ್ದು, ಲಿವರ್‌ನ ಆಕಾರ, ಗಾತ್ರಗಳನ್ನು ಸರಿ ಕ್ರಮದಲ್ಲಿ ಇರುವಂತೆ ಕಾಪಾಡಿಕೊಳ್ಳುತ್ತಿರುತ್ತವೆ. ಇಂತಹ ಸಮಯದಲ್ಲಿ ಅಪಘಾತವಾಗಿ ಲಿವರ್‌ಗೆ ಬಾಹ್ಯ ಘಾಸಿಯುಂಟಾಗಿ ಕೋಶ ಹಾನಿಯಾದಾಗ ಲಿವರ್ ತನಗೆ ತಾನೆ ಸರಿಹೊಂದುತ್ತದೆ. ಆದರೆ ಲಿವರ್‌ನ ಹೆಚ್ಚು ಭಾಗ ಘಾಸಿಗೊಂಡಿದ್ದಲ್ಲಿ ವಾಸಿಯಾಗುವುದು ಕಷ್ಟ. ಆಗ ಈ ಸ್ಟೆಮ್‌ಗಳ ಸಹಾಯ ಬೇಕೇ ಬೇಕು ಎನ್ನುತ್ತಾರೆ ಪೆನ್ಸಿಲ್‌ವೇನಿಯಾ ವಿಶ್ವವಿದ್ಯಾನಿಲಯದ ಗ್ಯಾಸ್ಟ್ರೋಎಂಟೆರಾಲಜಿ (ಪಚನ ಕ್ರಿಯೆ ಸಂಬಂಧಿತ ಅಂಗಾಂಗಗಳ ಅಧ್ಯಯನ) ವಿಭಾಗದ ಸಹಾಯಕ ಪ್ರಾಧ್ಯಾಪಕಿ ಲಿಂಡಾ ಗ್ರೀನ್‌ಬಾಮ್.

ಲಿವರ್ ತನಗೆ ತಾನೆ ವಾಸಿಯಾಗುವಾಗ ಉತ್ಪತ್ತಿಯಾಗುವ ಕೋಶಗಳನ್ನು ಸಂಗ್ರಹಿಸಿ, ಅಧ್ಯಯನ ಮಾಡಿ, ಅವುಗಳನ್ನು ಹೋಲುವ ಕೋಶಗಳನ್ನು ಸ್ಟೆಮ್ ಸೆಲ್‌ಗಳಿಂದ ಉತ್ಪಾದಿಸಲಾಗುತ್ತದೆ. ೭ ಸಂಶೋಧಕರನ್ನು ಒಳಗೊಂಡ ಲಿಂಡಾ ಅವರ ತಂಡವು ಈಗಾಗಲೇ ಇಲಿಗಳ ಮೇಲೆ ಈ ಸಂಶೋಧನೆಯನ್ನು ಪ್ರಯೋಗಿಸಿದ್ದು, ಲಿವರ್ ಕೋಶಗಳನ್ನು ಪೂರ್ಣ ಪ್ರಮಾಣದಲ್ಲಿ ಸೃಷ್ಟಿಸಲು ಯಶಸ್ವಿಯಾಗಿದ್ದಾರೆ. ಭವಿಷ್ಯದಲ್ಲಿ ಲಿವರ್ ಬದಲಾವಣೆಗೂ ಇದು ದಾರಿ ತೋರಿಸುತ್ತದೆ ಎಂಬುದು ಇವರ ಬಲವಾದ ವಾದ. ವ್ಯಕ್ತಿಯ ಘಾಸಿಗೊಂಡ ಲಿವರ್‌ನಿಂದ ಕೋಶಗಳನ್ನು ತೆಗೆದುಕೊಂಡು ಅವನ್ನು ಸ್ಟೆಮ್ ಸೆಲ್ ಮೂಲಕ ಅಭಿವೃದ್ಧಿ ಪಡಿಸಿ, ಸಂಪೂರ್ಣ ಲಿವರ್‌ನ್ನೇ ಬಾಹ್ಯವಾಗಿ ಸೃಷ್ಟಿಸಿ, ನಂತರ ದೇಹದೊಳಗೆ ಸೇರಿಸಿ ಕಸಿ ಮಾಡುವ ಕಾಲವೂ ಹೆಚ್ಚಿನ ದಿನವಿಲ್ಲ ಎಂದು ಲಿಂಡಾ ಹೇಳುತ್ತಾರೆ.

ಏನಿದು ಸ್ಟೆಮ್ ಸೆಲ್?!

ಸ್ಟೆಮ್ ಸೆಲ್‌ಗಳ ಮಹತ್ವ ಅರಿತಿರುವವರು, ಇವನ್ನು ದೇವ ಕಣಗಳು ಎನ್ನಬಹುದು. ಮಾಯಾ ಜೀವಕೋಶಗಳೂ ಎನ್ನಬಹುದು! ದೇಹದ ಎಲ್ಲ ಅಂಗಾಗಳಲ್ಲೂ ಕಂಡು ಬರುವ, ಆದರೆ ಕೇವಲ ಹೊಕ್ಕಳ ಬಳ್ಳಿಯಲ್ಲಿ ಮಾತ್ರ ಸಂಗ್ರಹಿಸಲು ಸಿಗುವ ಅದ್ಭುತ ಜೀವಕೋಶಗಳಿವು.

ಈ ಕೋಶಗಳಿಗೆ ದೇಹದ ಯಾವುದೇ ಅಂಗಾಂಗವಾಗಿ ಪರಿವರ್ತಿತಗೊಳ್ಳಬಲ್ಲ ಶಕ್ತಿಯಿರುತ್ತದೆ. ೧೯೬೦ ರಲ್ಲಿ ಕೆನಡಾ ದೇಶದ ವಿಜ್ಞಾನಿಗಳಾದ ಅರ್ನೆಸ್ಟ್ ಎ. ಮ್ಯಾಕ್ ಕುಲ್ಲಾಹ್ ಹಾಗೂ ಜೇಮ್ಸ್ ಇ. ಟಿಲ್ ಈ ಕೋಶಗಳನ್ನು ಸಂಶೋಧಿಸಿದಾಗ, ಮಹತ್ವವರಿಯದ ನಾಗರಿಕ ಸಮಾಜ ಅಷ್ಟಾಗಿ ಬೆಲೆ ಕೊಟ್ಟಿರಲಿಲ್ಲವಂತೆ. ಆದರೆ ದಿನಕಳೆದಂತೆ ಈ ಕ್ಷೇತ್ರದಲ್ಲಿ ನೂರಾರು ಸಂಶೋಧನೆಗಳಾಗಿ ಅಂಗಾಂಗ ರಚನೆಯಲ್ಲಿ ಇವುಗಳ ಮಹತ್ವ ಇರುವುದು ತಿಳಿದ ಮೇಲೆ ಕೊಂಚ ಗಮನ ಹರಿಸಲು ಜನರು ಪ್ರಾರಂಭಿಸಿದ್ದಾರೆ.

ಏನಿದು ಸ್ಟೆಮ್ ಸೆಲ್?: ಸ್ಟೆಮ್ ಸೆಲ್‌ನ ಬಗ್ಗೆ ವಿವರಿಸಬೇಕಾದರೆ, ಇಡೀ ಜನನ ಪ್ರಕ್ರಿಯೆಯ ಬಗ್ಗೆಯೇ ಹೇಳಬೇಕಾಗುತ್ತದೆ. ಗಂಡು- ಹೆಣ್ಣಿನ ಮಿಲನವಾಗಿ, ವೀರ್ಯ ಹಾಗೂ ಹಾಗೂ ಅಂಡಾಣುಗಳು ಬೆರೆತು ಸೃಷ್ಟಿಯಾಗುವ ಕೋಶಗಳು ದ್ವಿಗುಣಗೊಳ್ಳುತ್ತಾ, ಮಾಂಸದ ಮುದ್ದೆಯಾಗಿ, ನಂತರ ಭ್ರೂಣವಾಗಿ ಮಗುವಾಗಿ ಜನ್ಮ ಪಡೆಯುತ್ತದೆ. ಆ ಮಾಂಸದ ಮುದ್ದೆ (ಬ್ಲಾಸ್ಟೋಸೈಟ್) ಯಲ್ಲಿ ಕಂಡು ಬರುವ ಕೋಶಗಳಲ್ಲಿ ಸ್ಟೆಮ್ ಸೆಲ್‌ಗಳು ಸಿಗುತ್ತವೆ. ಭ್ರೂಣದ ಈ ಕೋಶಗಳೇ ಮುಂದೆ ಮಗುವಿನ ದೇಹದಲ್ಲಿ ಎಲ್ಲ ಅಂಗಾಗಗಳನ್ನೂ ರಚಿಸುತ್ತಾ, ಪರಿಪೂರ್ಣವಾಗಿ ಮಗು ರೂಪಗೊಂಡಾಗ ಹೊರ ಜಗತ್ತಿಗೆ ಪಾದ ಬೆಳೆಸುತ್ತದೆ. ಹಾಗಾಗಿ ಈ ಮೂಲ ಜೀವ ಧಾತುವನ್ನೇ ವಿಜ್ಞಾನಿಗಳು ಎಂಬ್ರಿಯಾನಿಕ್ ಸ್ಟೆಮ್ ಸೆಲ್‌ಗಳೆಂದು ನಾಮಕರಣ ಮಾಡಿದ್ದಾರೆ. ಈ ಜೀವಕೋಶಗಳು ಹೆರಿಗೆಯ ಸಂದರ್ಭದಲ್ಲಿ ಮಗು ಆಚೆ ಬಂದಾಗ, ಬೆಸೆದುಕೊಂಡಿರುವ ಹೊಕ್ಕಳ ಬಳ್ಳಿಯಲ್ಲಿ ಕಂಚ ಇನ್ನೂ ಉಳಿದಿರುತ್ತವೆ. ಅವನ್ನು ಸಂಗ್ರಹಿಸಿಕೊಂಡು ವೈದ್ಯಕೀಯ ಲೋಕಕ್ಕೆ ಬಳಸಿಕೊಳ್ಳುವುದು ಮುಂದಿನ ಸವಾಲು.

ಇವಲ್ಲದೆ ಹಿರಿಯ ಸ್ಟೆಮ್ ಸೆಲ್‌ಗಳೆಂದೂ ಒಂದು ವಿಧವಿದೆ. ಅದು ಯಾವುದ ವಯೋಮಾನದ ವ್ಯಕ್ತಿಯ ದೇಹದ ಜೀವಕೋಶದಲ್ಲಿ ಕಂಡುಬರುವಂಥದ್ದು. ದೇಹದ ಘಾಸಿಗೊಳ್ಳುವ ಜೀವಕೋಶಗಳನ್ನು ದುರಸ್ತಿ ಮಾಡುವುದು ಇವುಗಳ ಕೆಲಸ.

ಈಗಿನ ಸಂಶೋಧನೆಯೇನೆಂದರೆ, ಎಂಬ್ರಿಯಾನಿಕ್ ಸ್ಟೆಮ್ ಸೆಲ್ ಗಳನ್ನು ಹೊಕ್ಕಳ ಬಳ್ಳಿಯಿಂದ ಸಂಗ್ರಹಿಸಿ, ಅವುಗಳಿಂದ ನಮಗೆ ಬೇಕಾದ ಅಂಗಗಳನ್ನು ಪುನರ್ ಸೃಷ್ಟಿ ಮಾಡಿಕೊಳ್ಳುವುದು. ಶಸ್ತ್ರ ಚಿಕಿತ್ಸೆ ಮೂಲಕ ಘಾಸಿಯಾದ ಅಂಗಗಳ ಜೀವಕೋಶದ ಮಾದರಿ ಸಂಗ್ರಹಿಸಿ, ಅದರಂತೆ ಕೋಶಗಳನ್ನು ಸ್ಟೆಮ್ ಸೆಲ್ ಮೂಲಕ ಉತ್ಪಾದಿಸಿ, ಅವನ್ನು ಮತ್ತೆ ಆ ಅಂಗಕ್ಕೆ ಸೇರಿಸಿ ಅಂಗವನ್ನು ವಾಸಿಯಾಗುವಂತೆ ಮಾಡಿಕೊಳ್ಳಬಹುದು.

ಸ್ಟೆಮ್ ಸೆಲ್ ವಿಧಗಳು: ೧. ಟೋಟಿಪೊಟೆಂಟ್- (ದ್ವಿವಿಭಜಕ ಶಕ್ತಿಯುಳ್ಳ) ವೀರ್ಯ, ಅಂಡಾಣು ಮಿಲನದಿಂದ ಉತ್ಪತ್ತಿಯಾಗುವ ಕೋಶ. ೨. ಪ್ಲೂರಿಪೊಟೆಂಟ್- (ಬಹುವಿಭಜಕ ಶಕ್ತಿಯುಳ್ಳ) ಟೋಟಿಪೊಟೆಂಟ್ ಸೆಲ್‌ನ ಮುಂದುವರೆದ ಭಾಗ, ಗುರುತು ಒಳಗೊಂಡದ್ದು. ೩. ಮಲ್ಟಿಪೊಟೆಂಟ್- ಯಾವುದೇ ಕೋಶವಾಗಬಲ್ಲ ಶಕ್ತಿಯುಳ್ಳ ಕೋಶ. ಯೂನಿಪೊಟೆಂಟ್ (ಏಕಮುಖ ಕೋಶ)- ಕೇವಲ ಸ್ವಜಾತಿಯ, ಪ್ರತ್ಯೇಕ ಅಂಗದ ಜೀವಕೋಶವಾಗಿ ಪರಿವರ್ತಿತ ಶಕ್ತಿಯುಳ್ಳ ಕೋಶ.

8 ಕಾಮೆಂಟ್‌ಗಳು:

ಅವಿ ಹೇಳಿದರು...

ನೋಡ್ ನೋಡು ತಂತ್ರಜ್ಞಾನ ಅಂದ್ರೆ ಎಷ್ಟು ಬೇಗ ಅಪ್ಡೇಟ್ ಮಾಡ್ತಿಯ. ಪ್ರೇಮ ಪತ್ರ ಮಾತ್ರ ಹಾಗೆ ಬಿಟ್ಟಿದಿಯ. ಚೆನ್ನಾಗಿದೆ ಗುರು ನಿನ್ನ ಮೇಲಿನ ಪ್ರೀತಿಗಾಗಿ ಓದಲು ಶುರು ಮಾಡಿದ ಈ ವಿಷಯ ನನಗೂ ಇಷ್ಟ ಆಗೋಕೆ ಶುರು ಆಗಿದೆ - ಅವಿ

Unknown ಹೇಳಿದರು...

ನೇಸರ, ಕತ್ತಲೆಯಲ್ಲೇ ಸೃಷ್ಟಿ ಅಂತಾರೆ. ತಂತ್ರಜ್ಞಾನಿ ಕೂಡ ಹಾಗೇ ಅನಿಸ್ತಿದೆ. ಕಪ್ಪು ಹಾಳೆಯಲ್ಲಿ ಪ್ರಬುದ್ಧ
ಬರೆಹ. ಖುಷಿಯಾಯ್ತು. ಬರೆಹದಲ್ಲಿ ಲವಲವಿಕೆಯಿದೆ. ಆಸಕ್ತಿಕರ ಸಂಗತಿಗಳಿಂದ ತುಂಬಿಹೋಗಿದೆ. ಒಂದಿಷ್ಟು ಲಘು ಬರೆಹಗಳೂ ಮೂಡಿಬರಲಿ ಎಂಬುದು ಸದ್ಯದ ಆಶಯ.


- ಗೊದ್ಲಬೀಳು ಪರಮೇಶ್ವರ,
ಬೆಂಗಳೂರು

ಗೋವಿಂದ್ರಾಜ್ ಹೇಳಿದರು...

Nesra, as your name itself indicates you are more interested towards nature and technology, which the man still has been finding it very difficult to understand its uniqueness. You new blog is very nice. It made me, who hated the science, for some years to go through all the items.
The writings of Tejswi came to my mind while reading these articles. Any ways, congrates. Do update the blog every week. So that not disspointing people like us...

Unknown ಹೇಳಿದರು...

ಹಾಯ್,
ನಿಮ್ಮ ಬ್ಲಾಗ್ ಬಗ್ಗೆ ಮೊನ್ನಿನ ಕನ್ನಡಪ್ರಭದಲ್ಲಿ ಓದಿದೆ. ಕುತೂಹಲದಿಂದ ಅಂತಜರ್ಾಲ ಪುಟ ತೆರೆದಾಗ ತುಂಬ ಖುಷಿಯಾಯ್ತು. ವಿಜ್ಞಾನದ ಬಗ್ಗೆ ಕನ್ನಡದಲ್ಲಿ ಬರಹಗಳು ಕಡಿಮೆ ಎಂಬ ಕೊರಗಿಗೆ ನಿಮ್ಮ ಬ್ಲಾಗ್ ಸಮಾಧಾನ ತರಬಲ್ಲದು. ಗಂಭೀರವಾಗಿ ಬ್ಲಾಗ್ ಬರಹ ಆರಂಭಿಸಿರುವ ನೀವು, ನಿಮಗಿಂತ ದೊಡ್ಡವನೂ-ದಡ್ಡನೂ ಆದ ನನಗೆ ನಿಜಕ್ಕೂ ಸ್ಫೂತರ್ಿ ಒದಗಿಸಿದ್ದೀರಿ.
-ದೇವಳಿ ರ

ಗೋವಿಂದ್ರಾಜ್ ಹೇಳಿದರು...

Ae boss why didnot you still update the blog.am looking forward for some more special things from you da.

ನೇಸರ ಕಾಡನಕುಪ್ಪೆ ಹೇಳಿದರು...

Thank You Avinash :-)

ನೇಸರ ಕಾಡನಕುಪ್ಪೆ ಹೇಳಿದರು...

Thank You Govindraj. Nimma protsaha heege irali.

ನೇಸರ ಕಾಡನಕುಪ್ಪೆ ಹೇಳಿದರು...

ರವೀಂದ್ರ ಅವರಿಗೆ ಧನ್ಯವಾದಗಳು. ನನ್ನ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆಯನ್ನು ಕಳುಹಿಸಿದಕ್ಕಾಗಿ ಧನ್ಯವಾದಗಳು. ನಿಮ್ಮ ಬೆಂಬಲ ಎಂದೂ ಹೀಗೇ ಇರಲಿ. ನಿಮ್ಮ ಈ ಮೇಲ್ ಐಡಿಯನ್ನು ಕೊಡಿ.

ನಿಮ್ಮವ,

ನೇಸರ ಕಾಡನಕುಪ್ಪೆ