
೨೦೦೮ ರ ಮೇ ತಿಂಗಳು. ಸಮಯ ೨ ಗಂಟೆ ೨೮ ನಿಮಿಷ. ಚೈನಾದ ಸೆಕ್ವಾನ್ ಪ್ರಾಂತ್ಯದಲ್ಲಿ ಅಂದು ಎಲ್ಲವೂ ಸಹಜವಾಗಿರಲಿಲ್ಲ. ಇಡೀ ಜಗತ್ತೇ ಮೌನವಾದಂತೆ ಭಾಸ. ಹಕ್ಕಿಗಳ ಕಲರವವಿಲ್ಲ, ಗಾಳಿ ಬೀಸುತ್ತಿರಲಿಲ್ಲ. ಗಿಡಮರಗಳು ಬರೆದ ಚಿತ್ರವೇನೋ ಎಂಬಷ್ಟು ಸ್ಥಬ್ಧವಾಗಿ ನಿಂತಿದ್ದವು. ತಕ್ಷಣವೇ ಬಂದೆರಗಿತು ಅನಿರೀಕ್ಷಿತ ಭೂಕಂಪನ!
ಭೂಕಂಪನದ ಶಕ್ತಿ ಎಷ್ಟು ತೀವ್ರವಾಗಿತ್ತೆಂದರೆ, ಸುಮಾರು ೧೨೦೦ ಹೀಲಿಯಂ ಬಾಂಬ್ಗಳನ್ನು ಒಟ್ಟಿಗೆ ಸಿಡಿಸಿದಾಗ ಉತ್ಪತ್ತಿಯಾಗುವ ಶಕ್ತಿಗೆ ಸಮನಾಗಿತ್ತು. ಸುಮಾರು ೨೮೦ ಕಿಲೋ ಮೀಟರ್ ವ್ಯಾಸದ ಪ್ರದೇಶ ಇನ್ನಿಲ್ಲವೇನೋ ಎಂಬಂತೆ ನಾಶವಾಯಿತು. ಎಲ್ಲ ನಗರಗಳೂ ನಾಶವಾದವು. ೭೦ ಸಾವಿರ ಮಂದಿ ಪ್ರಾಣ ಕಳೆದುಕೊಂಡರು. ೨೦ ಸಾವಿರ ಮಂದಿ ಕಾಣೆಯಾದರು. ೮ ಮಿಲಿಯನ್ ಮಂದಿ ಮನೆಗಳನ್ನು ಕಳೆದುಕೊಂಡು ಬೀದಿಗೆ ಬಿದ್ದರು. ವಿಪರ್ಯಾಸವೆಂದರೆ ಆಗ ಅಲ್ಲಿ ಒಂದೇ ಒಂದು ರಸ್ತೆಯೂ ಉಳಿದಿರಲಿಲ್ಲ!
೨ ತಿಂಗಳು ನೀರವ ಮೌನ. ಕಾಣೆಗೊಂಡವರನ್ನು ಸತ್ತವರ ಸಾಲಿಗೆ ಸೇರಿಸಲಾಯಿತು. ನಂತರ ಅಲ್ಲಿಗೆ ಬಂದವರು. ಚೈನಾದ ಪ್ರಸಿದ್ಧ ಮಾಂಟ್ ರಿಯಲ್ ವಿಶ್ವವಿದ್ಯಾನಿಲಯದ ಎಕೋಲೆ ಪಾಲಿಟೆಕ್ನಿಕ್ ಶಾಲೆಯ ವಿಜ್ಞಾನಿ ಜೀ ಶೋಚೆಂಗ್, ಸಮೀಕ್ಷೆಗಾಗಿ. ಅವರಿಗೆ ಕಂಡದ್ದು ಮುರಿದು ಬಿದ್ದಿದ್ದ ರಸ್ತೆ, ಸೆತುವೆಗಳು. ಶಾಲೆಗಳು ಶವದ ಮನಗಳಾಗಿದ್ದವು. ಎಲ್ಲಿ ನೋಡಿದರೂ ಶವಗಳು. ಸಹಿಸಲಾರದ ವಾಸನೆ. ಕಳೆದ ೩೦೦ ವರ್ಷಗಳ ಇತಿಹಾಸದಲ್ಲೇ ಸಂಭವಿಸದ ಈ ರೀತಿಯ ಭೂಕಂಪನ ಸಂಭವಿಸಬೇಕೆ? ಬೇಡ ಎಂದರು ಶೋಚೆಂಗ್. ಅದಕ್ಕಾಗಿ ಭೂಕಂಪನವನ್ನೇ ತಪ್ಪಿಸಬಲ್ಲ, ಮುಂದಾಗುವ ಭೂಕಂಪನವನ್ನು ಪತ್ತೆ ಹಚ್ಚುವ ಅದ್ಭುತ ತಂತ್ರಜ್ಞಾನವನ್ನು ಕಂಡುಹಿಡಿದರು.
ಏನದು ತಂತ್ರಜ್ಞಾನ?: ಚೈನಾದಲ್ಲಿ ಜಗತ್ತಿನಲ್ಲೇ ಅತಿ ಹೆಚ್ಚು ಭೂಕಂಪನಗಳು ಸಂಭಿವಿಸುತ್ತವೆ. ಹಾಗಾಗಿ ಚೈನಾ ಸರ್ಕಾರ ಮುಂದಾಗುವ ಭೂಕಂಪನಗಳನ್ನು ಪತ್ತೆಹಚ್ಚಲು ಜಿಪಿಎಸ್ (ಗ್ಲೋಬಲ್ ಪೊಸಿಷನಿಂಗ್ ಸಿಸ್ಟಂ) ಅನ್ನು ಅವಲಂಬಿಸಿದೆ. ಜಿಪಿಎಸ್ ಎಂದರೆ ನಾವು ಭೂಮಿಯ ಮೇಲೆ ಕುಳಿತಲ್ಲೇ ಭೂಮಿಯ ಕಕ್ಷೆಯಲ್ಲಿ ಸುತ್ತುತ್ತಿರುವ ಉಪಗ್ರಹದ ಮೂಲಕ ನಮ್ಮ ನೆಲೆಯನ್ನು ಕಂಡುಕೊಳ್ಳುವ ವಿಧಾನ. ನಮ್ಮ ನೆಲೆಯನ್ನು ಭೂಮಿಯ ಮೇಲೆ ಕೇವಲ ೨ ಸೆಂಟಿ ಮೀಟರ್ ಎತ್ತರದಷ್ಟು ನಿಖರವಾಗಿ ಗುರುತಿಸಬಲ್ಲ ಶಕ್ತಿ ಈ ವಿಧಾನಕ್ಕಿದೆ. ವಾಹನಗಳಲ್ಲಿ ಹಾಗೂ ದೇಶದ ರಕ್ಷಣಾ ವ್ಯವಸ್ಥೆ ಭೂಪಟಗಳನ್ನು ರಚಿಸಿಕೊಳ್ಳಲು ಹಾಗೂ ನಾವು ನಿಂತ ಜಾಗವನ್ನು ಗುರುತಿಸಿಕೊಳ್ಳಲು ಇದು ಹೆಚ್ಚಾಗಿ ಬಳಕೆಯಾಗುತ್ತದೆ. ಈ ತಂತ್ರಜ್ಞಾನವನ್ನು ಬಳಸಿಕೊಂಡು ಚನಾ ಹವಾಮಾನ ಇಲಾಖೆಯ ವಿಜ್ಞಾನಿಗಳು, ಭೂಖಂಡಗಳ ಪದರಗಳ ನೆಲೆಯನ್ನು ಗಮನಿಸುತ್ತಿದ್ದರು. ವರ್ಷಕ್ಕೆ ೨ ಮಿಲಿ ಮೀಟರ್ನಷ್ಟು ನೆಲೆಯಲ್ಲಿ ವ್ಯತ್ಯಾಸವಾದರೂ ಆ ಪ್ರಾಂತ್ಯಕ್ಕೆ ಎಚ್ಚರಿಕೆ ಗಂಟೆಯನ್ನು ಮೊಳಗಿಸಿ, ಹುಷಾರಾಗಿರಿ ಎನ್ನಲಾಗುತ್ತಿತ್ತು. ಆದರೆ ವಾಸ್ತವವಾಗಿ ಜಿಪಿಎಸ್ ನೀಡುತ್ತಿದ್ದ ಮಾಹಿತಿಗೂ, ಸತ್ಯಾಂಶಕ್ಕೂ ವ್ಯತ್ಯಾಸವಿತ್ತು. ೨ ಮಿ.ಮಿ ಎನ್ನುವ ಮಾಹಿತಿ, ವಾಸ್ತವದಲ್ಲಿ ೨ ಸೆಂ.ಮಿ ಆಗಿರುತ್ತಿತ್ತು. ಇದರಿಂದ ನಿಖರ ಮಾಹಿತಿ ಸಿಗಲಾರದು ಎಂಬ ಕಾರಣಕ್ಕೆ ಶೋಚೆಂಗ್ ಈ ಹೊಸ ತಂತ್ರಜ್ಞಾನ ಪತ್ತೆ ಮಾಡಿದ್ದಾರೆ.
ಈ ತಂತ್ರಜ್ಞಾನ ಬಹು ಸುಲಭ. ಶೋಚೆಂಗ್ ಸುಮಾರು ೭೫ ಮಿಲಿಯನ್ ಡಾಲರ್ ವೆಚ್ಚದಲ್ಲಿ ೩ ಕಿಲೋಮೀಟರ್ ಆಳದ ೩ ಬಾವಿಗಳನ್ನು ಭೂಮಿಯಲ್ಲಿ ಕೊರೆದು, ಕೆಲವು ಸೂಕ್ಷ್ಮ ವೈಜ್ಞಾನಿಕ ಸಾಧನಗಳನ್ನು ಅಳವಡಿಸಿದ್ದಾರೆ. ಲಕ್ಷಾಂತರ ವರ್ಷಗಳಿಂದ ಹಲವು ಭೂಕಂಪನಗಳನ್ನು ಕಂಡಿರುವ ಭೂಮಿಯನ್ನು ಆ ಸಾಧನಗಳು ಅಧ್ಯಯನ ಮಾಡುತ್ತವೆ. ಅದರಲ್ಲಿ ಭೂಕಂಪನ ಅಳೆಯುವ ರಿಕ್ಟರ್ ಮಾಪಕದಿಂದ ಹಿಡಿದು, ಭೂಕಂಪಕ್ಕೆ ಮುನ್ನ ಭೂಮಿ ಒಸರುವ ರಾಸಾಯನಿಕ ವಸ್ತುಗಳನ್ನು ಪತ್ತೆ ಪಚ್ಚುವ, ದೂರದ ನಿಯಂತ್ರಣಾ ಕೇಂದ್ರಕ್ಕೆ ಮಾಹಿತಿ ರವಾನಿಸುವ ರೇಡಿಯೋ ಉಪಕರಣಗಳು, ನೆಟ್ವರ್ಕ್ ಸಾಧನಗಳಿರುತ್ತವೆ. ಭೂಮಿಯ ತಾಪ ಹಾಗೂ ದ್ರವವಸ್ತುಗಳ ಸಂಯೋಜನೆ, ವ್ಯತ್ಯಾಸಗಳನ್ನು ಅವು ಗುರುತಿಸಿ, ಸುಮಾರು ೧ ತಿಂಗಳಿಗೂ ಮುನ್ನವೇ ಸಂಭವಿಸುವ ಭೂಕಂಪನದ ಬಗ್ಗೆ ಎಚ್ಚರಿಕೆಯನ್ನು ನೀಡುತ್ತವೆ. ಹಾಗಾಗಿ ಇಂತಹ ಸಾಧನಗಳನ್ನು ಅತಿ ಹೆಚ್ಚು ಭೂಕಂಪನ ಸಂಭವಿಸುವ ಸ್ಥಳಗಳಲ್ಲಿ ಪ್ರತಿಷ್ಠಾಪಿಸಿದರೆ ಸಾಕಷ್ಟು ಸಮಸ್ಯೆಗಳನ್ನು ತಡೆಗಟ್ಟಬಹುದು ಎಂಬುದು ಶೋಚೆಂಗ್ ವಾದ.
ಅಲ್ಲದೆ ಭೂಕಂಪನ ಸಂಭವಿಸುವುದಕ್ಕೆ ೧ ತಿಂಗಳ ಕಾಲಾವಕಾಶ ಇರುವುದರಿಂದ ನಗರಗಳನ್ನು ಖಾಲಿ ಮಾಡಿ, ಜನರ ಪ್ರಾಣ, ಆಸ್ತಿ - ಪಾಸ್ತಿ ಉಳಿಸಲೂ ಸಮಯ ಸಿಗುತ್ತದೆ ಎನ್ನುತ್ತಾರೆ.