ಸೋಮವಾರ, ನವೆಂಬರ್ 17, 2008

ಚಂದ್ರನ ಚೂರು!

ಇತ್ತೀಚೆಗಷ್ಟೇ ಭಾರತವು ಚಂದ್ರಯಾನವನ್ನು ಕೈಗೊಂಡು ವಿಶ್ವದ ಅಚ್ಚರಿಯ ಕಣ್ಣುಗಳಿಗೆ ಪಾತ್ರರಾದದ್ದು ಎಲ್ಲರಿಗು ತಿಳಿದೇ ಇದೆ. ಇಸ್ರೋ ಭವಿಷ್ಯದಲ್ಲಿ ಸೂರ್ಯಯಾನವನ್ನೂ ಮಾಡುತ್ತದಂತೆ! ಚಂದ್ರನ ಮೇಲೆ ಕೆಲವೇ ವರ್ಷಗಳಲ್ಲಿ ರೋಬಾಟ್‌ನ್ನೂ ಇಳಿಸುತ್ತದಂತೆ. ಈ ಅಂತೆ ಕಂತೆಗಳ ನಡುವೆಯೇ ಚಂದ್ರನಿಗೆ ಸಂಬಂಧಿಸಿದ ಈ ಮಾಹಿತಿಯನ್ನು ಒಮ್ಮೆ ನೋಡಿ. ಭಾರತ ಚಂದ್ರಯಾನ ಕೈಗೊಂಡಿದ್ದು ನಿಜಕ್ಕೂ ಸಾರ್ಥಕ ಅನ್ನಿಸದಿರದು.
ಮೆರಿಕಾದ ಹೂಸ್ಟನ್‌ನಲ್ಲಿರುವ ಬಾಹ್ಯಾಕಾಶ ವಿಜ್ಞಾನಿಗಳು ಈ ಪ್ರಯೋಗದಲ್ಲೇನಾದರೂ ಗೆದ್ದರೆ, ನಾವು ಇಂದಿನ ಎಲ್ಲಾ ಸಾಂಪ್ರದಾಯಿಕ ಹಾಗೂ ಮಾಲಿನ್ಯಕಾರಿ ವಿದ್ಯುತ್ ಮೂಲಗಳಿಗೂ ಶಾಶ್ವತವಾಗಿ ವಿದಾಯ ಹೇಳಬಹುದು. ನಾಸಾದ ವಿಜ್ಞಾನಿ ಡಾ. ಡೇವಿಡ್ ಕ್ರಿಸ್‌ವೆಲ್, ನಮ್ಮ ಭೂಮಿಗೆ ಸಾಕಾಗುವಷ್ಟು ವಿದ್ಯುತ್ತನ್ನು ಚಂದ್ರನ ಮೂಲಕ ಪಡೆಯಬಹುದೆಂದು ಪ್ರಯೋಗ ಮಾಡಹೊರಟಿದ್ದಾರೆ !

ಇಂದಿನ ಎಲ್ಲಾ ವಿದ್ಯುತ್ ಮೂಲಗಳಾದ ನೀರು, ಗಾಳಿ, ಕಲ್ಲಿದ್ದಲು ಮತ್ತು ಅಣುಶಕ್ತಿ, ಯಾವಾಗಲೂ ಒಂದಲ್ಲಾ ಒಂದು ತೊಂದರೆಯನ್ನು ಕೊಡುತ್ತಲೇ ಇರುತ್ತವೆ. ನೀರಿಲ್ಲದಿದ್ದರೆ ಬೆಳೆಯೂ ಇಲ್ಲ, ಮನೆಗೆ ದೀಪವೂ ಇಲ್ಲ! ಇನ್ನು ಗಾಳಿ. ಬೀಸಿದರೆ ಉಂಟು ಇಲ್ಲದಿದ್ದರೆ ಇಲ್ಲ. ಇನ್ನು ಕಲ್ಲಿದ್ದಲೋ, ಮುಗಿಯ ಬಂದು ವರ್ಷಗಳೇ ಆಗಿವೆ. ಅಣು ಸ್ಥಾವರಗಳಿಂದಂತೂ ಹೇಳಲಾಗದಂತಹ ಪ್ರಾಣ ಭಯ ಬೇರೆ! ಇವೆಲ್ಲರದ ಜೊತೆಗೆ, ಭರಿಸಲಾರದಷ್ಟು ಪರಿಸರ ಮಾಲಿನ್ಯವೂ ಆಗುತ್ತದೆ. ಈ ಎಲ್ಲಾ ಶತಮಾನದ ತೊಂದರೆಗೂ, ನಾಸಾ ಶಾಶ್ವತವಾದ ಪರಿಹಾರವನ್ನು ಕಂಡುಹಿಡಿಯ ಹೊರಟಿದೆ. ಅದೇ ಚಂದ್ರನಿಂದ ವಿದ್ಯುತ್ತನ್ನು ಪಡೆಯುವುದು.
ಇದು ಆಶ್ಚರ್ಯದ ಸಂಗತಿಯೇ. ನಂಬಲು ತುಸು ಕಷ್ಟವೇ. ಆದರೆ ವಿಜ್ಞಾನ ಪ್ರತಿಯೊಂದಕ್ಕೂ ಪುರಾವೆಗಳನ್ನು ನೀಡುತ್ತಾ, ನಮ್ಮನ್ನು ನಂಬುವಂತೆ ಮಾಡಿಬಿಡುತ್ತದೆ. ಸೌರ ಶಕ್ತಿಯ ಬಗ್ಗೆ ನಾವೆಲ್ಲಾ ಕೇಳಿಯೇ ಇದ್ದೇವೆ. ವಿಫುಲವಾಗಿ ದೊರಕುವ ಸೌರಶಕ್ತಿಯನ್ನು ಬಳಸಿಕೊಳ್ಳಲು ಮಾನವ ಹೇಗೇಗೋ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾನೆ. ಹೊಸ ಹೊಸ ಸಾಧನಗಳನ್ನು ಕಂಡುಹಿಡಿಯುತ್ತಲೇ ಇದ್ದಾನೆ. ಆದರೂ ವಿಶ್ವವನ್ನೇ ನಿಯಂತ್ರಿಸುವ ಈ ಸೌರಶಕ್ತಿಯನ್ನು ಗರಿಷ್ಠವಾಗಿ ಬಳಸಿಕೊಳ್ಳಲು ಸೋಲುತ್ತಲೇ ಇದ್ದಾನೆ.

ಇದಕ್ಕೆ ಕಾರಣಗಳು ಹಲವು. ಭೂಮಿಯ ಸುತ್ತಲೂ ಇರುವ ವಾತಾವರಣ ಹಾಗೂ ಹಲವು ರಕ್ಷಣಾ ಪದರಗಳು, ನಿಜವಾದ ಶಕ್ತಿಯುತವಾದ ಸೂರ್ಯನ ಕಿರಣಗಳನ್ನು ಸೋಸಿ, ಜೀವ ಪೋಷಣೆಗೆ ಮಾರಕವಾಗದಂತಹ ಬೆಳಕನ್ನು ಕೊಡುತ್ತವೆ. ಹೀಗಾದಾಗಲೂ ನಾವು ಭೂಮಿಯ ಹಲವು ಕಡೆಗಳಲ್ಲಿ ಪ್ರಬಲವಾದ ಸೂರ್ಯನ ಬೆಳಕನ್ನು ಪಡೆಯುತ್ತೇವಾದರೂ, ಅದು ಶಕ್ತಿ ಕಳೆದುಕೊಂಡ ಬೆಳಕು. ಜೊತೆಗೆ ಮೋಡ, ಮಳೆ ಇತ್ಯಾದಿಗಳಿಂದಾಗಿ ಆ ದುರ್ಬಲ ಬೆಳಕು ಮತ್ತೂ ಸೋಸಿ ಹೋಗುತ್ತದೆ. ಈ ತೊಂದರೆಗಳನ್ನು ಮನಗಂಡ ನಾಸಾ, ಚಂದ್ರನಲ್ಲಿ ಸೋಲಾರ್ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸುವಲ್ಲಿ ಗಂಭೀರವಾಗಿ ಯೋಚಿಸುತ್ತಿದೆ.

ಚಂದ್ರನ ಮೇಲೆ ಸೋಲಾರ್ ಸ್ಥಾವರಗಳನ್ನು ಸ್ಥಾಪಿಸಿದರೆ ಅನುಕೂಲಕಗಳು ಹೆಚ್ಚು. ಅಲ್ಲಿ ಯಾವುದೇ ರೀತಿಯ ವಾತಾವರಣ, ರಕ್ಷಣಾ ಪದರಗಳು ಇಲ್ಲವಾದ್ದರಿಂದ, ಸೂರ್ಯನ ನೇರವಾದ ಕಿರಣಗಳು ಚಂದ್ರನ ಮೇಲ್ಮೈಯನ್ನು ಮುಟ್ಟುತ್ತವೆ. ನಮಗೆ ಗೊತ್ತಿರುವಂತೆ, ಚಂದ್ರನ ಮೇಲ್ಮೈ ಉಷ್ಣಾಂಶ ೧೨೭ ಡಿಗ್ರಿ ಸೆಲ್ಸಿಯಸ್ಸ್‌ನಷ್ಟು ಇರುತ್ತದೆ. ಭೂಮಿಯ ಮೇಲ್ಮೈ ಉಷ್ಣಾಂಶ ಇದರ ಮುಂದೆ ಏನೇನೂ ಅಲ್ಲ. ಅಂದರೆ, ಅತಿ ಹೆಚ್ಚು ಶಕ್ತಿಯ ಸೌರ ಕಿರಣಗಳು ಇಲ್ಲಿ ಪ್ರಭಾವ ಬೀರುತ್ತವೆ. ಆದ್ದರಿಂದ ನಾಸಾ ಚಂದ್ರನ ಮೇಲ್ಮೈನ ಮೇಲೆ ಸೌರ ಫಲಕಗಳನ್ನು ಸ್ಥಾಪಿಸ ಹೊರಟಿದೆ.

ಕ್ರಿಸ್‌ವೆಲ್ ಹೇಳುವ ಹಾಗೆ, ೨೦೫೦ರ ಸುಮಾರಿಗೆ ಭೂಮಿಯ ಮೇಲೆ ೧೦ ಬಿಲಿಯನ್ ಜನ ವಾಸಿಸುತ್ತಿರುತ್ತಾರೆ. ಅವರೆಲ್ಲರಿಗೆ ವರ್ಷವೊಂದಕ್ಕೆ ೨೦ ಟೆಟ್ರಾವ್ಯಾಟ್‌ಗಳಷ್ಟು ವಿದ್ಯುತ್ ಬೇಕಾಗುತ್ತದೆ. ನಾಸಾದ ಅನ್ವೇಷಣೆಗಳ ಪ್ರಕಾರ, ಚಂದ್ರ ವರ್ಷವೊಂದಕ್ಕೆ ಕನಿಷ್ಟ ೧೩,೦೦೦ ಟೆಟ್ರಾವ್ಯಾಟ್ ಶಕ್ತಿಯನ್ನು ಪಡೆಯುತ್ತದೆ. ಅಂದರೆ ನಾವು ಚಂದ್ರನ ಮುಖಾಂತರ ಕೇವಲ ೧ ಭಾಗದಷ್ಟು ವಿದ್ಯುತ್ತನ್ನು ಪಡೆದರೂ, ಇಂದಿನ ಎಲ್ಲಾ ಸಾಂಪ್ರದಾಯಿಕ ವಿದ್ಯುತ್ ಸ್ಥಾವರಗಳ ತೊಂದರೆಗಳನ್ನೂ ಸುಲಭವಾಗಿ ದಾಟಬಹುದು. ನಾಸಾ ಬಳಿ ಈಗಾಗಲೇ ಚಂದ್ರನ ಮೇಲ್ಮೈ, ರಚನೆ ಮತ್ತಿತರ ಪ್ರಾಯೋಗಿಕ ವಿವಿರಗಳ ಮಾಹಿತಿಯೂ ಇರುವುದರಿಂದ, ಚಂದ್ರ ಶಕ್ತಿಯನ್ನು ಪಡೆಯುವುದು ಕಷ್ಟವೇನಲ್ಲ ಎಂದು ನಾಸಾ ಹೇಳಿದೆ. ೧೯೬೯ನೇ ಇಸವಿಯಿಂದಲೂ ಚಂದ್ರನ ಇಂಚಿಂಚನ್ನೂ ಶೋಧಿಸಿರುವ ನಾಸಾ, ಚಂದ್ರ ಶಕ್ತಿಯನ್ನು ಭೂಮಿಯ ಕಡೆಗೆ ಹರಿಸುವಲ್ಲಿ ಕಾರ್ಯನಿರತವಾಗಿದೆ. ಲೂನಾರ್ ( ಚಂದ್ರನ ) ಖಚ್ಚಾ ವಸ್ತುಗಳಿಂದಲೇ ಸೌರ ವಿದ್ಯುತ್ ಸ್ಥಾವರದ ನಿರ್ಮಾಣವಾಗಲಿದೆ. ಇದರಿಂದ ಖಚ್ಚಾ ವಸ್ತುಗಳ ಸಾಗಾಣಿಕೆಯ ಖರ್ಚು ಇಲ್ಲವಾದಂತಾಗುತ್ತದೆ. ನಂತರ ಈಗ ಇರುವ ತಂತ್ರವನ್ನೇ ಬಳಸಿಕೊಂಡು ಭೂಮಿಯಿಂದಲೇ ಎಲ್ಲವನ್ನೂ ನಿಯಂತ್ರಿಸಲಾಗುತ್ತದೆ.

ಕಾರ್ಯ ಹೀಗೆ: ಚಂದ್ರನಿಂದ ವಿದ್ಯುತ್ ಉತ್ಪಾದನೆಯಾಗಿ, ಚಂದ್ರನ ಪೂರ್ವ ಮತ್ತು ಪಶ್ಚಿಮ ಭಾಗಗಳಲ್ಲಿ ಸೌರ ವಿದ್ಯುತ್ ಫಲಕಗಳನ್ನು ಸ್ಥಾಪಿಸಲಾಗುತ್ತದೆ.ಈ ಫಲಕಗಳು ವಿದ್ಯುತ್ತನ್ನು ಉತ್ಪಾದಿಸಿ, ನೆಲದಲ್ಲಿ ಹೂತಿರುವ ತಂತಿಗಳ ಮೂಲಕ, ಮೈಕ್ರೋವೇವ್ ಜನರೇಟರ್‌ಗಳಿಗೆ ಮುಟ್ಟಿಸುತ್ತವೆ. ಆ ಮೈಕ್ರೋವೇವ್ ಜನರೇಟರ್‌ಗಳು ವಿದ್ಯುತ್ತನ್ನು ಮೈಕ್ರೋವೇವ್‌ಗಳಾಗಿ ಪರಿವರ್ತಿಸಿ, ಭೂಮಿಯ ಕಡೆ ಮುಖ ಮಾಡಿರುವ ಪ್ರತಿಫಲನ ಫಲಕಗಳ ಮೂಲಕ ಭೂಮಿಗೆ ರವಾನಿಸುತ್ತವೆ (ಮೈಕ್ರೋವೇವ್‌ಗಳು ಶೂನ್ಯದಲ್ಲಿಯೂ ಚಲಿಸುತ್ತವೆ.). ಭೂಮಿಯಲ್ಲಿರುವ ವಿಶೇಷ ಅಂಟೇನಾಗಳು ಮೈಕ್ರೋವೇವ್‌ಗಳನ್ನು ಸ್ವೀಕರಿಸಿ ಪುನಃ ವಿದ್ಯುತ್ತಾಗಿ ಪರಿವರ್ತಿಸುತ್ತವೆ.

ಮನುಷ್ಯನಿಗೆ ಯಾವುದೂ ಅಸಾಧ್ಯವಲ್ಲ. ಚಂದ್ರ ಶಕ್ತಿ ಮಾತ್ರ ಬರುವ ವರ್ಷಗಳ ಕತ್ತಲೆಯನ್ನು ಹೋಗಲಾಡಿಸುವ ಬೆಳಕಾಗಬಲ್ಲದು. ಸೌರ ಸ್ಥಾವರಗಳನ್ನು ಚಂದ್ರನ ಮೇಲೆ ಸ್ಥಾಪಿಸುವುದು ಸುಲಭದ ಮಾತೇನಲ್ಲ. ವರ್ಷಗಟ್ಟಲೇ ಹಲವರು ಅಲ್ಲಿ ದುಡಿಯಬೇಕಾಗುತ್ತದೆ. ಅದಕ್ಕಾಗುವ ಖರ್ಚೂ ಅತ್ಯಧಿಕ. ಆದರೆ ಒಮ್ಮೆ ಸ್ಥಾಪಿಸಿ ಬಂದ ಮೇಲೆ ಅದು ತಾನು ಬಳಸಿಕೊಂಡ ಎಲ್ಲಾ ಖರ್ಚನ್ನೂ ಮರಳಿ ಕೊಡುತ್ತದೆ. ಜೊತೆಗೆ ವರ್ಷಕ್ಕೆ ಬೇಕಾಗುವ ಎಲ್ಲಾ ವಿದ್ಯುತ್ತನ್ನೂ ಚಂದ್ರನ ಮೇಲಿನ ಒಂದೇ ಸ್ಥಾವರ ಕೊಡುವುದರಿಂದ ಲಾಭ ಅಧಿಕವೇ. ಜೊತೆಗೆ ಮಾಲಿನ್ಯ ಮುಕ್ತ ಪರಿಸರವೂ ನಮ್ಮದಾಗುತ್ತದೆ.

2 ಕಾಮೆಂಟ್‌ಗಳು:

ಕೆ. ನರಸಿಂಹ ಮೂರ್ತಿ ಹೇಳಿದರು...

nimma blog nodi khusi, achari aytu. kriyashila manasu olage oddaduta kuruvudilla. nimma pustakada lekhanaggalnnu serisidiri. kattal bannadalli blog tere mareya sundariya kanninante, innu eneeno anthe kanisuttade...kattalu mattu kutuhala seri belakin bagge aase huttisuttade ansutte. nimma blog annu ishtu din nodade kattalalli iddene anisite?...

ಮಂಜುನಾಥ ಗೌಡ ಹೇಳಿದರು...

ಚಂದ್ರನಿಂದ ಭೂಮಿಗೆ ವಿಧ್ಯುತ್ ಪೂರೈಕೆ ಇದು ಮನುಕುಲದ ಇನ್ನೊಂದು ಅದ್ಭುತ ಸಾದನೆ......... ಇಧನ್ನು ಮಾನವ ಸಾದಿಸಿದರೆ......... ಅನ್ಯಗ್ರಹಗಳ ಜೀವಿಗಳು ಮತ್ತು ಅವರ ಆಕಾಶಕಾಯಗಳು ಆಗಾಗ ಭೂಮಿಯಲ್ಲಿ ಗೋಚರಿಸಲು ಕಾರಣ ಮತ್ತು ಅವುಗಳ ಆವಾಸ ಸ್ಥಾನ ಕಂಡುಹಿಡಿಯುವುದು ಸಾಧ್ಯವಾಗಬಹುದು.